ಮಾ.16ಕ್ಕೆ ರಾಜ್ಯವ್ಯಾಪಿ ಬಾರ್‌ ಬಂದ್‌?!

ಬೆಂಗಳೂರು: ರಾಜ್ಯದಲ್ಲಿ 579 ಮದ್ಯದಂಗಡಿಗಳ ಹರಾಜು ಪ್ರಕ್ರಿಯೆ ರದ್ದುಪಡಿಸುವಂತೆ ಒತ್ತಾಯಿಸಿ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ನೂರಾರು ಸನ್ನದು ಮದ್ಯ ಮಾರಾಟಗಾರರು ಗುರುವಾರ(ಮಾ.05) ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.

ಫೆಡರೇಷನ್‌ ಅಧ್ಯಕ್ಷ ಎಸ್‌.ಗುರುಸ್ವಾಮಿ ಮಾತನಾಡಿ, ಅಬಕಾರಿ ಇಲಾಖೆಯು ಸರ್ಕಾರಕ್ಕೆ ಸುಳ್ಳು ಮತ್ತು ತಪ್ಪು ಮಾಹಿತಿ ನೀಡಿ ರಾಜ್ಯದ ಸುಮಾರು 579 ಸನ್ನದುಗಳ ಚಿಲ್ಲರೆ ಮದ್ಯದಂಗಡಿಗಳು (ಸಿಎಲ್‌-2), ಬಾರ್‌ಮತ್ತು ರೆಸ್ಟೋರೆಂಟ್‌ಗಳು (ಸಿಎಲ್‌-9, ಸಿಎಲ್‌-11) ಹರಾಜು ಮಾಡಲು ಶಿಫಾರಸು ಮಾಡಿರುವುದು ಖಂಡನೀಯ ಎಂದು ಆರೋಪಿಸಿದರು, ಚಿಲ್ಲರೆ ಮದ್ಯ ಮಾರಾಟದ ಮೇಲೆ ಶೇ.20 ಲಾಭಾಂಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಜೊತೆಗೆ ಅಧಿಕಾರಿಗಳು ಸನ್ನದುದಾರರಿಂದ ಬೇನಾಮಿಯಾಗಿ ಹಣ ಪಡೆಯುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಮತ್ತು ಲಂಚ ಪಡೆಯುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರು ಮದ್ಯ ಸನ್ನದುದಾರರ ಮನವಿ ಸ್ವೀಕರಿಸಿ, ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಊರ್ಜಿತಗೊಂಡಿರುವ ಸನ್ನದುಗಳನ್ನು ಹರಾಜು ಪ್ರಕ್ರಿಯೆಯಿಂದ ಕೈಬಿಡಲು ನಿರ್ಧರಿಸಲಾಗುವುದು ಮತ್ತು ಉಳಿದ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹರಿಸಲಾಗುವುದು ಎಂದು ಅವರು ತಿಳಿಸಿದರು. ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಸಚಿವರು, ಕಾನೂನುಬದ್ಧ ಸನ್ನದುದಾರರು ಯಾವುದೇ ಅಧಿಕಾರಿಗಳಿಗೂ ಭಯಪಡುವ ಅಗತ್ಯವಿಲ್ಲ ಮತ್ತು ಹಣ ನೀಡಬಾರದು ಎಂದು ಸಲಹೆ ಮಾಡಿದರು.

ಮಾರ್ಚ್ 14ರೊಳಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ತೀರ್ಮಾನ ಕೈಗೊಳ್ಳದಿದ್ದಲ್ಲಿ ಮಾರ್ಚ್ 16ರಂದು ರಾಜ್ಯವ್ಯಾಪಿ ಮದ್ಯದಂಗಡಿಗಳನ್ನು ಬಂದ್ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

error: Content is protected !!