51 ವರ್ಷಗಳ ಹೋರಾಟದ ಫಲ: ವಕ್ಫ್‌ ವಿರುದ್ಧ ವಿರಕ್ತ ಮಠಕ್ಕೆ ಭರ್ಜರಿ ಜಯ

ವಿಜಯಪುರ: ಬರೋಬ್ಬರಿ 51 ವರ್ಷಗಳ ಹೋರಾಟದ ಬಳಿಕ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಗುರು ವಿರಕ್ತ ಮಠಕ್ಕೆ ವಕ್ಫ್‌ ವಿರುದ್ಧ ಜಯಸಿಕ್ಕಿದೆ.

ವಿರಕ್ತ ಮಠದ ಜಮೀನನ್ನು ಕರ್ನಾಟಕ ಸುನ್ನಿ ವಕ್ಫ್ ಮಂಡಳಿಯ ಆಸ್ತಿ ಎಂದು ನಮೂದಾಗಿ, ʻಕಬರಸ್ಥಾನ ವಕ್ಫ್ ಬೋರ್ಡ್’ ಎಂದು ಬದಲಿಸಲಾಗಿತ್ತು. ಆದರೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸಿಂದಗಿ ಮಠದ 600 ವರ್ಷಗಳ ಇತಿಹಾಸದ ದಾಖಲೆಗಳ ಆಧಾರದಲ್ಲಿ ಅಂತಿಮವಾಗಿ ಇದು ವಿರಕ್ತ ಮಠದ ಆಸ್ತಿ ಎನ್ನುವುದು ಸಾಬೀತಾಗಿದೆ.

ಸಿಂದಗಿ ಮಠ 600 ವರ್ಷಕ್ಕೂ ಹೆಚ್ಚು ಇತಿಹಾಸವುಳ್ಳ ಬಸವ ತತ್ವದ ಮಠ ಇದಾಗಿದ್ದು, ಹಲವು ಮಠಾಧಿಪತಿಗಳು ಅಧಿಕಾರ ನಡೆಸಿದ್ದರು ಮಠದ ಹಿಂದಿನ ಪೀಠಾಧಿಪತಿಗಳಾದ ಲಿಂಗೈಕ್ಯ ಶ್ರೀ ಶಾಂತವೀರ ಪಟ್ಟಾಧ್ಯಕ್ಷ ಸ್ವಾಮೀಜಿಯವರು ಈ ಭಾಗದಲ್ಲಿ ಅಪಾರ ಗೌರವಕ್ಕೆ ಪಾತ್ರರಾಗಿದ್ದರು.

ಆದರೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸರ್ವೆ ನಂ. 1020 ರಲ್ಲಿರುವ 1.28 ಎಕರೆ ವಿರಕ್ತ ಮಠದ ಜಮೀನನ್ನು ಕರ್ನಾಟಕ ಸುನ್ನಿ ವಕ್ಫ್ ಮಂಡಳಿಯ ಆಸ್ತಿ ಎಂದು ಕಂದಾಯ ದಾಖಲೆಗಳಾದ ಪಹಣಿಗಳಲ್ಲಿ (RTC) ನಮೂದಿಸಲಾಗಿತ್ತು. ಈ ಹಿಂದೆ ಮಠದ ಪೀಠಾಧಿಪತಿಗಳಾಗಿದ್ದ ಸಿದ್ದಲಿಂಗಯ್ಯ ಸ್ವಾಮೀಜಿ ಅವರ ಕಾಲದಲ್ಲಿ ಪಹಣಿಯ ಕಾಲಂ ನಂಬರ್ 11 ಖಾಲಿಯಿತ್ತು. ಆದರೆ, 2018-2019 ರ ಅವಧಿಯಲ್ಲಿ ಈ ಜಮೀನನ್ನು ‘ಕಬರಸ್ಥಾನ ವಕ್ಫ್ ಬೋರ್ಡ್’ ಎಂದು ಬದಲಾಯಿಸಲಾಗಿತ್ತು.

ಈ ಕುರಿತಂತೆ ದಿ.19-12-2024ರಂದು ಪ್ರಕರಣ ದಾಖಲಾಗಿತ್ತು. ವಿರಕ್ತಮಠದ ಆಸ್ತಿಯನ್ನು ವಕ್ಫ್ ಬೋರ್ಡ್‌ನಿಂದ ಮುಕ್ತಗೊಳಿಸುವಂತೆ 11 ತಿಂಗಳಿನಿಂದ ವಾದ-ಪ್ರತಿವಾದಗಳು ನಡೆದು ಕೊನೆಗೂ ಶ್ರೀಮಠದ ಆಸ್ತಿಯನ್ನು ಮರಳಿ ಮಠಕ್ಕೆ ನೀಡಲಾಗಿದೆ. ಈ ಆಸ್ತಿಗೂ ವಕ್ಫ್ ಬೋರ್ಡ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಮಾನ್ಯ ನ್ಯಾಯಾಲಯ ಆದೇಶಿಸಿದೆ.

ಸಿಂದಗಿ ಗುರುಬಸವ ವಿರಕ್ತಮಠದ ಆಸ್ತಿಯನ್ನು 1974ರಲ್ಲಿ ಅನಧಿಕೃತವಾಗಿ ವಕ್ಫ್ ಬೋರ್ಡ್ ತನ್ನ ಹೆಸರಿಗೆ ಮಾಡಿಕೊಂಡಿತ್ತು. ಇದರ ಬಗ್ಗೆ ಸಾಕಷ್ಟು ಹೋರಾಟ ಮಾಡಲಾಗಿ 2024ರಲ್ಲಿ ರಾಜ್ಯಾದ್ಯಂತ ವಕ್ಫ್ ಬೋರ್ಡ್ ವಿರುದ್ಧ ಸಾಕಷ್ಟು ಹೋರಾಟಗಳು ನಡೆದವು. ಇದೀಗ ಆಸ್ತಿಯು ಮರಳಿ ಮಠದ ಹೆಸರಿಗಾಗಿದೆ. ಗುರುಬಸವ ವಿರಕ್ತಮಠದ ಸೇವಾ ಸಮಿತಿಯ ಕಾರ್ಯದರ್ಶಿ ನಿಂಗಪ್ಪ ಗುರುಬಸಪ್ಪ ಪಟ್ಟಣಶೆಟ್ಟಿ ಹೇಳಿದ್ದಾರೆ.

ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸಿಂದಗಿ ಮಠದ 600 ವರ್ಷಗಳ ಇತಿಹಾಸದ ದಾಖಲೆಗಳನ್ನು ಸರ್ಕಾರದ ಮುಂದಿಟ್ಟಾಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳು, ಜಂಟಿ ಉಪವಿಭಾಗಾಧಿಕಾರಿಗಳ ಅವರ ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ವ್ಯಾಜ್ಯ ನಡೆಸಲಾಯಿತು. ಪಕ್ಷಗಾರರಾಗಿ ಸಿಂದಗಿ ವಿರಕ್ತಮಠ ಸೇವಾ ಸಮಿತಿ ವಿರಕ್ತಮಠ ಸಿಂದಗಿ (ಬಿಳೂರ) ಗೌರವಾಧ್ಯಕ್ಷ, ಶ್ರೀ ಮ.ನಿ.ಪ್ರ.ಗುರುಬಸವ ಚನ್ನಬಸವಮಹಾಸ್ವಾಮಿಗಳು ಹಾಗೆಯೇ ಪ್ರಕರಣದಲ್ಲಿ ಪಾರ್ಟಿಗಳಾಗಿ 1)ಸಿಂದಗಿ ತಹಶೀಲ್ದಾರ್, 2) ಕಂದಾಯ ನಿರೀಕ್ಷಕರು 3) ಗ್ರಾಮ ಆಡಳಿತ ಅಧಿಕಾರಿ 4) ವಿಜಯಪುರ ಜಿಲ್ಲಾ ವಕ್ಫ್ ಬೋರ್ಡ್ ಆಗಿದ್ದರು.

ಸಿಂದಗಿ ಮಠ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಮಠವು ಶಾಲಾ-ಕಾಲೇಜುಗಳನ್ನು ಸ್ಥಾಪಿಸಿದೆ. ಬ್ಯಾಡಗಿಯಲ್ಲಿರುವ ಶ್ರೀ ಗುರು ಕುಮಾರೇಶ್ವರ ಧಾರ್ಮಿಕ ಪಾಠಶಾಲೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಮಠದ ಆಡಳಿತಕ್ಕೊಳಪಟ್ಟಿವೆ. ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿ ತಮ್ಮ ಭವಿಷ್ಯ ರೂಪಿಸಿಕೊಂಡಿದ್ದಾರೆ.

error: Content is protected !!