ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಸಂಸತ್‌ನಲ್ಲಿ ಬಂಗಾಳದ ಬಿಜೆಪಿ ರಾಜ್ಯಸಭಾ ಮತ್ತು ಲೋಕಸಭೆ ಸಂಸದರನ್ನು ಭೇಟಿಯಾದ ವೇಳೆ ಪ್ರಧಾನಿ ಮೋದಿ ಈ ಸೂಚನೆ ನೀಡಿದರು.

ನಾವು ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ಬಂಗಾಳದಲ್ಲಿ ಈ ಚುನಾವಣೆಯಲ್ಲಿ ಗೆಲ್ಲುವಂತೆ ನೋಡಿಕೊಳ್ಳಬೇಕು. ನೀವೆಲ್ಲರೂ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೀರಿ. ಈ ಸರ್ಕಾರದ ವಿರುದ್ಧದ ಹೋರಾಟ ಮುಂದುವರಿಯಬೇಕು ಎಂದು ಸಂಸದರಿಗೆ ಪ್ರಧಾನಿ ಮೋದಿ ಕರೆ ನೀಡಿದರು.

ಎಸ್‌ಐಆರ್ ಪ್ರಕ್ರಿಯೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಮತದಾರರ ಪಟ್ಟಿ ‘ಶುದ್ಧೀಕರಣ’ ಅಗತ್ಯ ಹೆಜ್ಜೆಯಾಗಿದೆ ಎಂದರು. ಸರ್ಕಾರದ ಕಲ್ಯಾಣ ಕಾರ್ಯಗಳು ಜನರನ್ನು ಪರಿಣಾಮಕಾರಿಯಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ನಿಯಮಿತವಾಗಿ ಸಂಪರ್ಕವನ್ನು ಕಾಯ್ದುಕೊಳ್ಳುವಂತೆ ಸಂಸದರಿಗೆ ಸೂಚನೆ ನೀಡಿದರು.
ಈ ನಡುವೆ ಬಿಹಾರ ಮಾದರಿಯಲ್ಲೇ ಮುಂಬರುವ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಚುನಾವಣಾ ಜವಾಬ್ದಾರಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವಹಿಸಿಕೊಂಡಿದ್ದಾರೆ.