ದಿಸ್ಪುರ: ಮುಸ್ಲಿಂ ಧರ್ಮಗುರುವೊಬ್ಬರು ಮಸೀದಿಯ ಮೈಕ್ ಮೂಲಕ ಇಡೀ ಗ್ರಾಮಕ್ಕೆ ಬೆಳಗಿನ ಜಾವ ಎಚ್ಚರಿಕೆ ನೀಡಿದ ಪರಿಣಾಮವಾಗಿ 7 ಮಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಅಸ್ಸಾಂನಲ್ಲಿ ನಡೆದಿದೆ. ಧರ್ಮಗುರುವಿನ ಸಮಯಪ್ರಜ್ಞೆ ನೀರಿನಲ್ಲಿ ಮುಳುಗುತ್ತಿದ್ದ ವಾಹನದೊಳಗೆ ಸಿಲುಕಿದ್ದ7 ಜನರನ್ನು ಉಳಿಸಲು ಸಹಾಯ ಮಾಡಿತು.

ಮಂಗಳವಾರ (ಡಿಸೆಂಬರ್ 2) ಮುಂಜಾನೆ, ಅಸ್ಸಾಂನ ಶ್ರೀಭೂಮಿ ಜಿಲ್ಲೆಯಲ್ಲಿ ವಾಹನವು ನಿಯಂತ್ರಣ ಕಳೆದುಕೊಂಡು ರಾಷ್ಟ್ರೀಯ ಹೆದ್ದಾರಿಯಿಂದ ಜಾರಿ ಬದಿಯಲ್ಲಿದ್ದ ಕೆರೆಗೆ ಉರುಳಿ ಬಿದ್ದಿದೆ. ಬಳಿಕ ವಾಹನವು ನೀರಿನಲ್ಲಿ ಮುಳುಗಲು ಪ್ರಾರಂಭಿಸಿದೆ. ಹೊರಗಿನಿಂದ ದೊಡ್ಡ ಶಬ್ಧ ಕೇಳಿಬಂದಾಗ, ಜಾಮಾ ಮಸೀದಿಯ ಇಮಾಮ್ ಮತ್ತು ಮಿರಾಬಾರಿ ಮದ್ರಸಾ ಶಿಕ್ಷಕ ಮೌಲಾನಾ ಅಬ್ದುಲ್ ಬಾಸಿತ್ ತಕ್ಷಣವೇ ಮೈಕ್ ಬಳಸಿ ಗ್ರಾಮಸ್ಥರಿಗೆ ತುರ್ತು ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ತಕ್ಷಣದ ಸಹಾಯಕ್ಕಾಗಿ ಮನವಿ ಮಾಡಿದರು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.
ಕೆಲವೇ ನಿಮಿಷಗಳಲ್ಲಿ, ನೆರೆಹೊರೆಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿ ವಾಹನದಲ್ಲಿದ್ದ 7 ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದರು. ಧರ್ಮಗುರುವಿನ ಸಮಯಪ್ರಜ್ಞೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
