ಧಾರ್ (ಮಧ್ಯಪ್ರದೇಶ): ಹಿಂದೂ-ಮುಸ್ಲಿಮರ ಸಂಘರ್ಷದ ಕೇಂದ್ರವಾಗಿರುವ ಭೋಜ್‌ಶಾಲೆಯಲ್ಲಿ ಮತ್ತೆ ವಿವಾದ ಭುಗಿಲೆದ್ದಿದೆ. ಈ ಬಾರಿ ಹಿಂದೂ ಭಕ್ತರು ವಾಗ್ದೇವಿ ದೇವಿಯ ತೈಲ ವರ್ಣ ಚಿತ್ರವನ್ನು ಭೋಜಶಾಲಾಗೆ ತರುತ್ತಿದ್ದಂತೆ ಪುರಾತತ್ವ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಉರುಸ್ ಸಿದ್ಧತೆಗಾಗಿ ಸುಣ್ಣ-ಬಣ್ಣ ಹಚ್ಚುವ ಕಾರ್ಯಗಳು ಇಲ್ಲಿ ಅನುಮತಿಯಿಲ್ಲದೆ ನಡೆಯುತ್ತಿದ್ದರೆ ಹಿಂದೂ ಪೂಜೆಗಳಿಗೆ ನಿರಂತರ ತಡೆಯುಂಟು ಮಾಡಲಾಗುತ್ತಿದೆ ಎಂದು ಹಿಂದೂಗಳೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮುಸ್ಲಿಮರು ‘ಕಮಲ್ ಮೌಲಾ ಮಸೀದಿ’ ಎಂದು ಕರೆದರೆ ಹಿಂದೂ ಸಮುದಾಯ ಇದನ್ನು ವಾಗ್ದೇವಿ (ಸರಸ್ವತಿ) ದೇವಾಲಯವೆಂದು ಆರಾಧಿಸುತ್ತಿದೆ. ಹೀಗಾಗಿ ಇಲ್ಲಿ ಹಿಂದೂ-ಮುಸ್ಲಿಂ ಜಟಾಪಟಿ ಮಾಮೂಲಾಗಿದ್ದು, ಇದೀಗ ಪುರಾತತ್ವ ಇಲಾಖೆಯ ಸ್ವಾಧೀನದಲ್ಲಿದೆ.
ಭೋಜ್‌ಶಾಲೆ ಸಂಕೀರ್ಣಕ್ಕೆ ಪೂಜೆ ಮತ್ತು ಹನುಮಾನ್ ಚಾಲೀಸಾ ಪಠಣಕ್ಕಾಗಿ ಬಂದ ಹಿಂದೂ ಭಕ್ತರು ಬಂದಿದ್ದು. ಇದಕ್ಕೆ ಭಾರತೀಯ ಪುರಾತತ್ವ ಸಮೀಕ್ಷೆ (ASI) ತಡೆಯುಗೊಟ್ಟಿದ್ದು, ಭಕ್ತರು ತಂದಿದ್ದ ವಾಗ್ದೇವಿ ದೇವಿಯ ಹೊಸ ತೈಲವರ್ಣಚಿತ್ರವನ್ನು ವಶಪಡಿಸಿಕೊಂಡಿದೆ. ಚಿತ್ರವನ್ನು ಆವರಣದೊಳಗೆ ತರಲು ಅನುಮತಿ ನೀಡದ ಕಾರಣ ಪರಿಸ್ಥಿತಿ ಉಲ್ಬಣಿಸಿತ್ತು.
ಭೋಜ್ ಉತ್ಸವ ಸಮಿತಿಯವರು, “ಪ್ರತಿ ಮಂಗಳವಾರ, ನಾವು ದೇವಿಯ ಆರಾಧನೆ ನಡೆಸುತ್ತೇವೆ. ಈ ಬಾರಿ ಚಿತ್ರವನ್ನು ಮಾತ್ರ ಬದಲಾಯಿಸಿದ್ದೇವೆ. ಅದನ್ನು ಒಳಗೆ ತರುವ ಅವಕಾಶ ನೀಡಲಾಗಿಲ್ಲ ಮತ್ತು ವಶಪಡಿಸಿಕೊಂಡಿದ್ದಾರೆ. ನಾವು ಈ ಕ್ರಮವನ್ನು ವಿರೋಧಿಸುತ್ತೇವೆ. ಚಿತ್ರವನ್ನು ತಕ್ಷಣ ಹಿಂತಿರುಗಿಸಬೇಕು; ಇಲ್ಲದಿದ್ದರೆ ಪ್ರಬಲ ಪ್ರತಿಭಟನೆ ನಡೆಸುತ್ತೇವೆ,” ಎಂದು ಹೇಳಿದರು.
ವಸಂತ ಪಂಚಮಿ ಈ ಬಾರಿ ಜನವರಿ 23 ರಂದು ಬರುವುದರಿಂದ, ಹಿಂದೂ ಸಮುದಾಯ ದಿನವಿಡೀ ಪೂಜೆ ಮಾಡಲು ಮುಂದಾದರೆ, ಮುಸ್ಲಿಮರೂ ಸ್ಥಳದಲ್ಲಿ ಜುಮಾ ನಮಾಝ್ ಸಲ್ಲಿಸುತ್ತಾರೆ.

ವಿವಾದದ ಹಿನ್ನೆಲೆ
ಭೋಜ್‌ಶಾಲೆ ಹಿಂದೂ–ಮುಸ್ಲಿಂ ಸಂಘರ್ಷದ ಕೇಂದ್ರವಾಗಿದೆ. ಮುಸ್ಲಿಮರು ‘ಕಮಲ್ ಮೌಲಾ ಮಸೀದಿ’ ಎಂದು ಒತ್ತಾಯಿಸುತ್ತಾರೆ; ಹಿಂದೂ ಸಮುದಾಯ ಇದನ್ನು ವಾಗ್ದೇವಿ (ಸರಸ್ವತಿ) ದೇವಾಲಯವೆಂದು ತೋರಿಸುತ್ತದೆ.
ಮಧ್ಯಪ್ರದೇಶ ಹೈಕೋರ್ಟ್ ಆದೇಶದಂತೆ ASI 2024ರ ಮಾರ್ಚ್ 22ರಿಂದ ವೈಜ್ಞಾನಿಕ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಸಂಸ್ಕೃತ-ಪ್ರಾಕೃತ ಶಾಸನಗಳು ಪತ್ತೆಯಾಗಿದ್ದು, ಹೆಚ್ಚಿನವು “ಓಂ ಸರಸ್ವತೀಯಾಯೈ ನಮಃ” ಎಂಬ ಉಲ್ಲೇಖದಿಂದ ಪ್ರಾರಂಭವಾಗುತ್ತವೆ. “ಓಂ ನಮಃ ಶಿವಾಯ”, ಹಿಂದೂ ದೇವತೆಗಳ ವಿಗ್ರಹಗಳು, ಶೈಕ್ಷಣಿಕ ಕೇಂದ್ರದ ಗುರುತು ಸೂಚಿಸುವ ಶಾಸನಗಳು ಸಹ ಕಂಡುಬಂದಿವೆ. 1987 ರ ಉತ್ಖನನದಲ್ಲಿಯೂ ಹಿಂದೂ ಅವಶೇಷಗಳು ಬೆಳಕಿಗೆ ಬಂದಿವೆ.