ಮಂಗಳೂರು: ಮಂಗಳೂರಿನ ಕೋಣಾಜೆಯಲ್ಲಿ ಗಾಂಧಿ- ನಾರಾಯಣ ಗುರು ಸಂವಾದ ಶತಮಾನ ಕಾರ್ಯಕ್ರಮಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಕೆ.ಸಿ ವೇಣುಗೋಪಾಲ್ ಮಂಗಳೂರಿಗೆ ಆಗಮಿಸಿದ್ದು, ಈ ವೇಳೆ ನಾಟಕೀಯ ಘಟನೆಯೊಂದಕ್ಕೆ ಮಂಗಳೂರು ವಿಮಾನ ನಿಲ್ದಾಣ ಸಾಕ್ಷಿಯಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಂಗಳೂರು ಏರ್ಪೋರ್ಟ್ ಆಗಮಿಸುತ್ತಿದ್ದಂತೆ ಡಿಕೆ-ಸಿದ್ದು ಪರ ಬೆಂಬಲಿಗರು ಪ್ರತ್ಯೇಕ ಪ್ರತ್ಯೇಕವಾಗಿ ತಮ್ಮ ನೆಚ್ಚಿನ ನಾಯಕರ ಪರವಾಗಿ ಜೈಕಾರ ಮೊಳಗಿಸಿದ್ದಾರೆ. ವಿಶೇಷವೆಂದರೆ ಡಿಕೆ ಪರ ಮಿಥುನ್ ರೈ ಬೆಂಬಲಿಗರು ಘೋಷಣೆ ಕೂಗಿದರೆ, ಸಿದ್ದು ಪರ ಐವನ್ ಬೆಂಬಲಿಗರು ಘೋಷಣೆ ಕೂಗಿದರು. ವಿಶೇಷವೆಂದರೆ ಮಿಥುನ್ ಬೆಂಬಲಿಗರು ಜೈಕಾರ ಹಾಕಿದ್ದು, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮುಂದೆ.
ಆರಂಭದಲ್ಲಿ ಬೆಳಗ್ಗೆ 10.30ರ ವೇಳೆಗೆ ವೇಣುಗೋಪಾಲ್ ಬಜ್ಪೆ ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಶಾಲು ಹೊದಿಸಿ ಸ್ವಾಗತಿಸಿದರು. ಈ ವೇಳೆ ಜಮಾಯಿಸಿದ್ದ ಕಾರ್ಯಕರ್ತರು ಡಿಕೆ ಡಿಕೆ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.
ಇದಾದ ಅರ್ಧ ಗಂಟೆಯ ನಂತರ ಅಂದರೆ 11 ಗಂಟೆಗೆ ಸಿದ್ದರಾಮಯ್ಯ ಕೂಡ ಆಗಮಿಸಿದ್ದು, ಈ ವೇಳೆಯೂ ಕೆಲವು ಕಾರ್ಯಕರ್ತರು ಸಿದ್ದು ಸಿಎಂ ಆಗಿ ಪೂರ್ಣಾವಧಿ ಪೂರೈಸುವಂತೆ ಘೋಷಣೆ ಕೂಗಿದರು. ಇಲ್ಲಿ ಸಿದ್ದು ಪರ ಘೋಷಣೆ ಕೂಗಿರುವುದು ಐವನ್ ಡಿಸೋಜಾ ನೇತೃತ್ವದಲ್ಲಿ ಎನ್ನುವುದು ವಿಶೇಷ.
