ಮಂಗಳೂರು: ಪಣಂಬೂರು ಬೀಚ್‌ನಲ್ಲಿ ನಡೆದ ಲಕ್ಷಾಂತರ ಮೌಲ್ಯದ ಕಳವು ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ಕೇವಲ ಎರಡು ದಿನಗಳಲ್ಲೇ ಪತ್ತೆಹಚ್ಚಿ, ಕಳವಾದ ಎಲ್ಲಾ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನವಂಬರ್ 24ರಂದು ಬೆಳಿಗ್ಗೆ ಸ್ವಾತಿ ನಂದಿಪಳ್ಳಿ (24) ಅವರು ತಮ್ಮ ಸ್ನೇಹಿತ ರೋಹಿತ್ ವೆಮ್ಮಲೆಟ್ಟಿ ಎಂಬವರೊಂದಿಗೆ ಪಣಂಬೂರು ಬೀಚಿಗೆ ಭೇಟಿ ನೀಡಿದ್ದರು. ಇಬ್ಬರಿಗೂ ಸೇರಿದ ಚಿನ್ನಾಭರಣಗಳು ಮತ್ತು ಮೊಬೈಲ್‌ಫೋನ್‌ಗಳನ್ನು ಕಪ್ಪು ಬಣ್ಣದ ಬ್ಯಾಗಿನಲ್ಲಿ ಇಟ್ಟು ಸಮುದ್ರ ದಡದಲ್ಲಿ ಇರಿಸಿ, ನೀರಿನಲ್ಲಿ ಈಜಾಡಲು ತೆರಳಿದ್ದರು. ಬೆಳಿಗ್ಗೆ 11.50ರ ಸುಮಾರಿಗೆ ಹಿಂದಿರುಗಿದಾಗ ಬ್ಯಾಗ್ ಕಳವಾಗಿರುವುದು ಪತ್ತೆಯಾಯಿತು.
ಬ್ಯಾಗಿನಲ್ಲಿ 12 ಗ್ರಾಂ ಚಿನ್ನದ ಚೈನ್, 2 ಗ್ರಾಂ ಲಾಕೇಟ್, 2 ಗ್ರಾಂ ತೂಕದ ತಲಾ ಎರಡು ಉಂಗುರಗಳು, 4 ಗ್ರಾಂ ಕಿವಿಯೋಲೆ, Realme ಮೊಬೈಲ್, ಹಾಗೂ Samsung S24 Ultra ಸೇರಿ ಒಟ್ಟು ಮೌಲ್ಯ ಸುಮಾರು ₹3,33,000 ಆಗಿತ್ತು. ದೂರು ಸ್ವೀಕರಿಸಿದ ನಂತರ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನವೆಂಬರ್ 26ರಂದು ಪ್ರಕರಣವನ್ನು ಪತ್ತೆಹಚ್ಚಿದ ಪೊಲೀಸರು, ಕಳುವಿನಲ್ಲಿ ಭಾಗಿಯಾಗಿದ್ದ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಅಪ್ರಾಪ್ತನನ್ನು ಬಂಧಿಸಿ, ಎಲ್ಲಾ ಕಳವಾದ ವಸ್ತುಗಳನ್ನು ಬ್ಯಾಗ್ ಸಮೇತವಾಗಿ ವಶಪಡಿಸಿಕೊಂಡಿದ್ದಾರೆ.

ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ಕೆ. ರವಿಶಂಕರ್, ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ ಕೆ. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್, ಉಪನಿರೀಕ್ಷಕರು ಜ್ಞಾನಶೇಖರ್, ಶ್ರೀಕಲಾ, ಸಿಬ್ಬಂದಿ ಸಯ್ಯದ್ ಇಮ್ತಿಯಾಜ್, ರಾಕೇಶ್, ಶರಣಬಸವ ಅವರು ಕಾರ್ಯಾಚರಣೆ ನಡೆಸಿದ್ದರು.