ಬೆಂಗಳೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ಸುತ್ತ ನಡೆಯುತ್ತಿರುವ ರಾಜಕೀಯ ಪೈಪೋಟಿ ಮತ್ತಷ್ಟು ಗರಿಷ್ಠಕ್ಕೆ ತಲುಪಿದೆ. ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (ಡಿಕೆಎಸ್) ಇಬ್ಬರೂ ತಮ್ಮ ಬೆಂಬಲಿಗರ ಮೂಲಕ ತಮ್ಮ ಪರ ಬ್ಯಾಂಟಿಂಗ್ ಆಡಿಸುತ್ತಿದ್ದರೂ, ಇಬ್ಬರ ಬಾಯಲ್ಲೂ ಬರುವುದು ಮಾತ್ರ ಒಂದೇ ವಾಕ್ಯ- ಅದು ಅಂತಿಮ ನಿರ್ಧಾರ ಹೈಕಮಾಂಡ್‌ದ್ದೇ.

ಸಿದ್ದರಾಮಯ್ಯ ಅವರು ಕೇವಲ ಒಂದೇ ದಿನ ಹಿಂದಷ್ಟೇ, “ನಾನು ಐದು ವರ್ಷದ ಅವಧಿ ಪೂರ್ಣಗೊಳಿಸುತ್ತೇನೆ” ಎಂದು ದೃಢವಾಗಿ ಘೋಷಿಸಿದ್ದರು. ಇತ್ತ, ಡಿಕೆ ಶಿವಕುಮಾರ್ ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ತೆರೆ ಎಳೆದವರಂತೆ, “ಆತುರದಲ್ಲಿಲ್ಲ… ಸಿಎಂ ಹುದ್ದೆ ಕುರಿತು ಹೈಕಮಾಂಡ್ ಜೊತೆ ಯಾವುದೇ ಚರ್ಚೆ ನಡೆದೇ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಆದರೆ ರಾಜಕೀಯ ವಲಯದಲ್ಲಿ ಮಾತ್ರ ಮತ್ತೆ ಮತ್ತೆ ಕೇಳಿಬರುತ್ತಿರುವ ‘ಪವರ್–ಶೇರಿಂಗ್ ಫಾರ್ಮುಲಾ 2023’, ಮತ್ತೆ ಮಧ್ಯಂತರ ಬದಲಾವಣೆಯ ಚರ್ಚೆಗೆ ನಾಂದಿ ಹಾಡಿದೆ.
ಪ್ರಮುಖ ಬೆಳವಣಿಗೆಗಳು
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ, ಶುಕ್ರವಾರ ಬೆಳಗ್ಗೆ ನೇರವಾಗಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಕುತೂಹಲ ಎಬ್ಬಿಸಿದ್ದಾರೆ. “ಅಗತ್ಯವಿದ್ದಾಗ ಮಾತ್ರ ಹೈಕಮಾಂಡ್ ಮಧ್ಯಪ್ರವೇಶಿಸುತ್ತದೆ ಅನಗತ್ಯ ಊಹಾಪೋಹಗಳಿಗೆ ಬ್ರೇಕ್ ಹಾಕಿ” ಎಂದು ಹೇಳಿದ್ದಾರೆ.
ಇನ್ನೊಂದೆಡೆ ಹಲವಾರು ಒಕ್ಕಲಿಗ ಸಮುದಾಯ ಸಂಘಟನೆಗಳು, “ಡಿಕೆಎಸ್ ಅವರನ್ನು ಮುಖ್ಯಮಂತ್ರಿ ಮಾಡಬೇಕು” ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆಯಲು ಮುಂದಾಗಿವೆ.
ಇದು ಡಿಕೆಎಸ್ ಪರ ಬಣಕ್ಕೆ ದೊಡ್ಡ ಗೆಲುವು ಎನ್ನಲಾಗಿದೆ.

ಇನ್ನೂ ಮುಂದೆ ಹೋಗಿ ಶಾಸಕ ಹೆಚ್‌ಸಿ ಬಾಲಕೃಷ್ಣ ಅವರು, “ಹೈಕಮಾಂಡ್ ತ್ವರಿತ ನಿರ್ಧಾರ ತೆಗೆದುಕೊಳ್ಳಬೇಕು… ಡಿಕೆಎಸ್ ಅಂತಿಮವಾಗಿ ಸಿಎಂ ಆಗುತ್ತಾರೆ” ಎಂದು ನೇರ ಬ್ಯಾಟಿಂಗ್ ಬೀಸಿದ್ದಾರೆ.
ಆದರೆ ಕಾಂಗ್ರೆಸ್ ಎಂಎಲ್‌ಸಿ ಸಿದ್ದು ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು, “ಸಿದ್ದರಾಮಯ್ಯ–ಡಿಕೆಎಸ್ ನಡುವೆ ಯಾವುದೇ ಅಧಿಕಾರ ಹಂಚಿಕೆ ಒಪ್ಪಂದವೇ ಇಲ್ಲ”
ಎಂದು ಹೇಳಿ ತಮ್ಮ ತಂದೆ ಸಿಎಂ ಸ್ಥಾನದಲ್ಲೇ ಮುಂದುವರಿಯಬೇಕು ಎಂಬ ಸಂದೇಶ ನೀಡಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಸಿದ್ದರಾಮಯ್ಯ ಮತ್ತು ಡಿಕೆಎಸ್ ಇಬ್ಬರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ನಾಯಕತ್ವದ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. “ಮೊದಲು ಮಾತುಕತೆ, ನಂತರ ನಿರ್ಧಾರ” ಎಂಬ ಅವರ ಹೇಳಿಕೆ, ರಾಜ್ಯ ರಾಜಕೀಯದಲ್ಲಿ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.