ಬೆಂಗಳೂರು: ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಇತ್ತೀಚಿನ ಮಹತ್ವದ ನಿರ್ಣಯದಿಂದಾಗಿ ಡಿಸೆಂಬರ್ 1ರಿಂದಲೇ ಎಲ್‌ಪಿಜಿ ದರ ಭಾರೀ ಹೆಚ್ಚಾಗುವ ಸಾಧ್ಯತೆಯಿದೆ.

ಭಾರತ ಸರ್ಕಾರವು ಮುಂದಿನ ಒಂದು ವರ್ಷದವರೆಗೆ ಅಮೆರಿಕದಿಂದ ಎಲ್‌ಪಿಜಿ ಆಮದು ಮಾಡಿಕೊಳ್ಳುವ ಮಹತ್ವ ಒಪ್ಪಂದ ಮಾಡಿಕೊಂಡಿದೆ. ಆದರೆ ಈ ಆಮದು ಮಾಡಿಕೊಳ್ಳುವುದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ ದುಬಾರಿಯಾಗಬಹುದು ಎನ್ನಲಾಗಿದೆ. ಅಮೆರಿಕದೊಂದಿಗೆ ದೀರ್ಘಾವಧಿಯ ಎಲ್‌ಪಿಜಿ ಖರೀದಿ ಒಪ್ಪಂದವು ಸಕಾರಾತ್ಮಕ ಕ್ರಮವಾಗಿದ್ದರೂ, ಹೆಚ್ಚಿನ ದೂರ ಹಾಗು ಸರಕು ಸಾಗಣೆ ವೆಚ್ಚಗಳು ತೈಲ ಮಾರುಕಟ್ಟೆ ಕಂಪನಿಗಳಿಗೆ ಅಲ್ಪಾವಧಿಯಲ್ಲಿ ಸ್ವಲ್ಪ ದುಬಾರಿಯಾಗಬಹುದು ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಭಾರತ-ಅಮೇರಿಕ ಒಪ್ಪಂದವು ವಾರ್ಷಿಕವಾಗಿ 2.2 ಮಿಲಿಯನ್ ಟನ್ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಉದ್ದೇಶಿಸಿದೆ. ಒಟ್ಟಾರೆ ಇದು ಮಧ್ಯಪ್ರಾಚ್ಯ ಎಲ್‌ಪಿಜಿ ಉತ್ಪಾದಕರ ಮೇಲಿನ ಹಲವು ವರ್ಷಗಳ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಒಪ್ಪಂದದ ಕಾರ್ಯತಂತ್ರಗಳು ಅನುಕೂಲಕರವಾಗಿದ್ದರೂ ಸರಕು ಸಾಗಣೆ ವೆಚ್ಚ ಹೆಚ್ಚಾಗಲಿದೆ. ಇದು ತೈಲ ಮಾರುಕಟ್ಟೆ ಕಂಪನಿಗಳ ಆರ್ಥಿಕತೆಗೆ ತುಸು ಕಷ್ಟವೂ ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ಹೊರೆ ತಗ್ಗಿಸಲು ಎಲ್‌ಪಿಜಿ ಮಾರಾಟದ ದರವನ್ನು ಏರಿಸುವ ಸಾಧ್ಯತೆಯೂ ಇದೆ
ಮೂಲ ಮಾರುಕಟ್ಟೆಯ ಹೆಚ್ಚಿನ ಭಾಗವು ಈಗ ಅಮೇರಿಕಾಗೆ ಸ್ಥಳಾಂತರಗೊಳ್ಳುವುದರಿಂದ, ಇದು ಸಾಂದ್ರತೆಯ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಆಮದು ಅವಕಾಶವನ್ನು ಮತ್ತಷ್ಟು ವಿಸ್ತರಿಸುತ್ತದೆ. ಸೌದಿ ಅರೇಬಿಯಾದ ಎಲ್‌ಪಿಜಿ ಒಪ್ಪಂದದ ಬೆಲೆ ಕೂಡ ಕಡಿಮೆಯಾಗುತ್ತಿದ್ದು, ಜಾಗತಿಕ ಬೇಡಿಕೆ ಕುಸಿಯುತ್ತಿರುವುದರಿಂದ ಕನಿಷ್ಠ ಮಟ್ಟ ತಲುಪಿದೆ. ಇದು ಭಾರತ ಸೇರಿದಂತೆ ಏಷ್ಯಾ-ಪೆಸಿಫಿಕ್ ಪ್ರದೇಶದ ಎಲ್‌ಪಿಜಿ ಆಮದುದಾರರಿಗೆ ಎರಡು ಸ್ಪರ್ಧಾತ್ಮಕ ಬೆಲೆ ಆಯ್ಕೆಗಳ ಅವಕಾಶ ನೀಡಿದೆ. ಹೀಗಾಗಿ ಎಲ್‌ಪಿಜಿ ದರಗಳು ಏರಲಿದೆಯೇ ಎಂಬುದು ಇನ್ನೆರಡು ದಿನಗಳಲ್ಲಿ ತಿಳಿಯಲಿದೆ.