ಶಬರಿಮಲೆ: ಶಬರಿಮಲೆಗೆ ಕಾಡು ಮಾರ್ಗದಲ್ಲಿ ಸಂಚರಿಸುವ ಭಕ್ತರಿಗೆ ಆಗಾಗ ಹುಲಿ ಕಾಣಿಸುತ್ತಿರುವ ಘಟನೆಗಳು ನಡೆಯುತ್ತಿದೆ. ಆದರೆ ಯಾರಿಗೂ ಅಪಾಯ ಮಾಡಿರುವ ವರದಿಗಳಿಲ್ಲ. ಅಂದಾಜಿನ ಪ್ರಕಾರ ಶಬರಿ ಮಲೆ ಬರುವ ಪೆರಿಯಾರ್ ಕಾಡಿನಲ್ಲಿ 30ಕ್ಕಿಂತ ಜಾಸ್ತಿ ಹುಲಿಗಳಿದ್ದು, ಅದರ ಸಂಖ್ಯೆ ಇನ್ನಷ್ಟು ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಹುಲಿಗಳ ಗಣತಿ ನಡೆಲು ಎನ್‌ಟಿಸಿಎ ಮುಂದಾಗಿದೆ.

ಭಾರತೀಯ ವನ್ಯಜೀವಿ ಸಂಸ್ಥೆ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನಡೆಸುವ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಹುಲಿ ಗಣತಿ ಈ ಬಾರಿ ಡಿಸೆಂಬರ್ 1ರಿಂದ ಪ್ರಾರಂಭವಾಗಲಿದೆ. ಗಣತಿ ಆರಂಭವಾಗುತ್ತಿರುವ ಹಿನ್ನೆಲೆ, ಪೆರಿಯಾರ್ ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ 35 ದಾಟುತ್ತದೆಯೇ ಎಂಬ ಕುತೂಹಲ ಪರಿಸರ ಪ್ರೇಮಿಗಳಲ್ಲಿ ಹೆಚ್ಚಾಗಿದೆ.
ಪೆರಿಯಾರ್ ಅಭಯಾರಣ್ಯದ ವ್ಯಾಪ್ತಿಯಲ್ಲಿ ಶಬರಿಮಲೆ ಸನ್ನಿಧಾನಂ, ಪಂಪಾ ಗಣಪತಿ ಕೋವಿಲ್, ಪಂಪಾ–ಸನ್ನಿಧಾನಂ ಮಾರ್ಗ, ಸ್ವಾಮಿ ಅಯ್ಯಪ್ಪನ್ ರಸ್ತೆ, ಕರಿಮಲ ಮತ್ತು ಪುಲ್ಲುಮೇಡು ಸೇರಿದಂತೆ ಪ್ರಮುಖ ಅರಣ್ಯ ಮಾರ್ಗಗಳಿವೆ. ಗಣತಿಯಲ್ಲಿ ಭಾಗವಹಿಸಲು ಒಟ್ಟು 177 ಅರಣ್ಯ ಸಿಬ್ಬಂದಿ ಹಾಗೂ ಸ್ವಯಂಸೇವಕರನ್ನು ನಿಯೋಜಿಸಲಾಗಿದ್ದು, ಪೆರಿಯಾರ್ ಪೂರ್ವ ಮತ್ತು ಪೆರಿಯಾರ್ ಪಶ್ಚಿಮ ವಿಭಾಗಗಳನ್ನು ಸೇರಿಸಿ 59 ಬ್ಲಾಕ್‌ಗಳಾಗಿ ಪ್ರದೇಶವನ್ನು ವಿಭಜಿಸಲಾಗಿದೆ.
ಈ ಬಾರಿ ಗಣತಿಯನ್ನು ‘ಎಂ-ಸ್ಟ್ರೈಪ್ಸ್’ ಅಪ್ಲಿಕೇಶನ್ ಬಳಸಿ ಸಂಪೂರ್ಣವಾಗಿ ಕಾಗದರಹಿತವಾಗಿ ನಡೆಸಲಾಗುತ್ತದೆ. ಜಿಪಿಎಸ್ ಮೂಲಕ ಪ್ರಾಣಿಗಳ ಸಂಚರಿಸುವ ಪ್ರದೇಶಗಳಿಗೆ ಜಿಯೋ-ಟ್ಯಾಗ್ ಮಾಡಲಾಗುವುದು. ಗಣತಿಯ ಸಂದರ್ಭದಲ್ಲಿ ಹುಲಿಗಳ ಜೊತೆಗೆ ಆನೆ, ಎಮ್ಮೆ, ಕರಡಿ, ಚಿರತೆ ಮೊದಲಾದ ಪ್ರಾಣಿಗಳ ಮಾಹಿತಿ ಹಾಗೂ ಸಸ್ಯವರ್ಗದ ರಚನೆಗೆ ಸಂಬಂಧಿಸಿದ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತದೆ. ಜೊತೆಗೆ ಹುಲಿಗಳ ಬೇಟೆಪ್ರಾಣಿಗಳ ಸಂಖ್ಯೆ ಮತ್ತು ಅವುಗಳ ಚಲನೆಯನ್ನು ವಿಶ್ಲೇಷಿಸಿ ಕಾಡಿನ ಪರಿಸರ ವ್ಯವಸ್ಥೆಯ ಸ್ಥಿತಿಯನ್ನೂ ಅಂದಾಜಿಸಲು ಸಾಧ್ಯವಾಗಲಿದೆ.

ಮುಂದಿನ ಹಂತವಾಗಿ ಪ್ರತಿ ಗ್ರಿಡ್‌ನಲ್ಲಿ ಕ್ಯಾಮೆರಾ ಬಲೆಗಳನ್ನು ಅಳವಡಿಸಲಾಗುವುದು. ಕಬ್ಬಿಣದ ಚೌಕಟ್ಟಿನೊಳಗೆ ಅಳವಡಿಸಿದ ಉಷ್ಣ ಸಂವೇದಕ ಕ್ಯಾಮೆರಾಗಳು ಪ್ರಾಣಿಗಳು ಹಾದುಹೋಗುವಾಗ ಅವರ ದೇಹದ ಉಷ್ಣತೆಯಿಂದ ಉಂಟಾಗುವ ತಾಪಮಾನ ಬದಲಾವಣೆಯನ್ನು ಪತ್ತೆಮಾಡಿ ಸ್ವಯಂಚಾಲಿತವಾಗಿ ಚಿತ್ರಗಳನ್ನು ಸೆರೆಹಿಡಿಯುತ್ತವೆ. ಹಗಲು ಮತ್ತು ರಾತ್ರಿ ಎರಡೂ ಸಮಯಗಳಲ್ಲಿ ಕಾರ್ಯನಿರ್ವಹಿಸುವ ಈ ಕ್ಯಾಮೆರಾಗಳನ್ನು ಹುಲಿಯ ಪಟ್ಟೆಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವಂತೆ ಮಾರ್ಗದ ಎರಡೂ ಬದಿಗಳಲ್ಲಿ ಎದುರು–ಎದುರಿಗೆ ಅಳವಡಿಸಲಾಗುತ್ತದೆ.
ಸೆರೆಹಿಡಿದ ಚಿತ್ರಗಳ ಆಧಾರದ ಮೇಲೆ ಹುಲಿಯ ದೇಹದ ಮೇಲಿರುವ ಪಟ್ಟೆಗಳ ವಿನ್ಯಾಸ, ಉದ್ದ, ಅಗಲ ಹಾಗೂ ವಿಶೇಷ ಆಕಾರಗಳನ್ನು ವಿಶ್ಲೇಷಿಸಿ ಪ್ರತ್ಯೇಕ ಹುಲಿಗಳನ್ನು ಗುರುತಿಸಲಾಗುತ್ತದೆ. 2022ರ ಇತ್ತೀಚಿನ ಗಣತಿಯ ಪ್ರಕಾರ, ಪೆರಿಯಾರ್ ಹುಲಿ ಅಭಯಾರಣ್ಯದಲ್ಲಿ 32 ಹುಲಿಗಳು ಇರುವುದಾಗಿ ಅಂದಾಜಿಸಲಾಗಿದೆ.