ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಿಟಿಐ ಸ್ಥಾಪಕ ಇಮ್ರಾನ್ ಖಾನ್ ಅವರನ್ನು ಕೊಲ್ಲಲಾಗಿದೆ ಅಥವಾ ಜೈಲಿನಿಂದ ಹೊರಗೆ ಸಾಗಿಸಲಾಗಿದೆ ಎಂಬ ಸಾಮಾಜಿಕ ಮಾಧ್ಯಮ ವದಂತಿಗಳಿಗೆ ಅಡಿಯಾಲಾ ಜೈಲು ಆಡಳಿತ ಬುಧವಾರ ಸ್ಪಷ್ಟನೆ ನೀಡಿದೆ. ಜೈಲು ಅಧಿಕಾರಿಗಳು ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದು, ಸದ್ಯ ಹೇಗಿದ್ದಾರೆ ಎನ್ನುವುದರ ಬಗ್ಗೆ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಆದರೆ ಪಿಟಿಐ ಪಕ್ಷವು ಸರ್ಕಾರವನ್ನು ತಕ್ಷಣ ಅಧಿಕೃತವಾಗಿ ಮಾಹಿತಿ ನೀಡುವಂತೆ ಆಗ್ರಹಿಸಿದೆ.

ಇತ್ತೀಚಿನ ದಿನಗಳಲ್ಲಿ ಅವರ ಸಾವಿನ ಬಗ್ಗೆ ಮತ್ತು ಗುಪ್ತವಾಗಿ ಬೇರೆಡೆ ಸಾಗಿಸಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದವು. ಜೈಲು ಆಡಳಿತವು ಅವನ್ನು ಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಖಂಡಿಸಿದ್ದು, ಅವರು ಸಂಪೂರ್ಣ ಆರೋಗ್ಯದಲ್ಲಿದ್ದು, ಅಡಿಯಾಲಾ ಜೈಲಿನಲ್ಲೇ ಇದ್ದಾರೆ ಎಂದಿದೆ. ಅಧಿಕಾರಿಗಳ ಪ್ರಕಾರ, ಈ ಸ್ಪಷ್ಟೀಕರಣವನ್ನು ಸಾರ್ವಜನಿಕರಲ್ಲಿ ಮತ್ತು ಪಿಟಿಐ ಕಾರ್ಯಕರ್ತರಲ್ಲಿರುವ ಆತಂಕ ಕಡಿಮೆ ಮಾಡುವ ಉದ್ದೇಶದಿಂದ ನೀಡಲಾಗಿದೆ.
ಪಿಟಿಐ ಈ ಬಗ್ಗೆ ಹೇಳಿಕೆ ನೀಡಿದ್ದು, ಖಾನ್ ಅವರ ಕುಟುಂಬ ಸದಸ್ಯರು ಅವರನ್ನು ಕೂಡಲೇ ಭೇಟಿಯಾಗುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿದೆ. ಅಲ್ಲದೆ ಇಮ್ರಾನ್ ಅವರ ಭದ್ರತೆ ಮತ್ತು ಮೂಲಭೂತ ಹಕ್ಕುಗಳ ಸಂರಕ್ಷಣೆ ರಾಜ್ಯದ ಜವಾಬ್ದಾರಿ ಎಂದು ನೆನಪಿಸಿದೆ.
)
ಇಮ್ರಾನ್ ಖಾನ್ ಅವರ ಮೂವರು ಸಹೋದರಿಯರಾದ ನೊರೀನ್ ನಿಯಾಜಿ, ಅಲೀಮಾ ಖಾನ್ ಮತ್ತು ಡಾ. ಉಜ್ಮಾ ಖಾನ್ ಜೈಲಿನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾಗ, ಪಂಜಾಬ್ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ನೊರೀನ್ ನಿಯಾಜಿ, “ನನ್ನ ಕೂದಲನ್ನು ಹಿಡಿದು ನೆಲಕ್ಕೆ ಎಸೆದು, ರಸ್ತೆಯುದ್ದಕ್ಕೂ ಎಳೆದೊಯ್ದರು” ಎಂದು ಆರೋಪಿಸಿದರು. ಈ ಬಗ್ಗೆ ಪಂಜಾಬ್ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದ ಕುಟುಂಬ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿದೆ.

ಸಭೆಗಳಿಗೆ ‘ಅಘೋಷಿತ ನಿಷೇಧ’
ಇಮ್ರಾನ್ ಖಾನ್ ಆಗಸ್ಟ್ 2023 ರಿಂದ ಅಡಿಯಾಲಾ ಜೈಲಿನಲ್ಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅವರಿಗೆ ಭೇಟಿ ನೀಡಲು ಅವಕಾಶ ಇಲ್ಲದೆ ಬಂದಿರುವುದಾಗಿ ಕುಟುಂಬದವರು ಆರೋಪಿಸಿದ್ದಾರೆ. ಖೈಬರ್–ಪಖ್ತುನ್ಖ್ವಾ ಮುಖ್ಯಮಂತ್ರಿ ಸೊಹೈಲ್ ಅಫ್ರಿದಿ ಕೂಡ ಏಳು ಬಾರಿ ಪ್ರಯತ್ನಿಸಿದರೂ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.