ಕಾಸರಗೋಡು: ಕೋಝಿಕ್ಕೋಡ್‌ನಿಂದ ಬೆಂಗಳೂರಿಗೆ ಹೊರಟಿದ್ದ ಭಾರತಿ ಟ್ರಾವೆಲ್ಸ್ ಬಸ್ಸನ್ನು ಬಸ್ ಚಾಲಕ ಕುಡಿದು ಟೈಟ್ ಆಗಿ ಎರ್ರಾಬಿರ್ರಿ ಓಡಿಸಿದ ಘಟನೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಾಲಕನ ಅತಿರೇಕವನ್ನು ಪ್ರಶ್ನಿಸಿದಾಗ ಆತ , “ಎಲ್ಲರನ್ನು ಆಕ್ಸಿಡೆಂಟ್ ಮಾಡಿ ಕೊಲ್ಲುತ್ತೇನೆ” ಎಂದು ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿದೆ.

ಭಾನುವಾರ ಮೈಸೂರು ತಲುಪುವ ಮುನ್ನವೇ ಚಾಲಕನ ಚಾಲನೆಯಲ್ಲಿ ಅಸಹಜತೆ ಮನಿಸಿದ ಪ್ರಯಾಣಿಕರು ಕಾರಣ ಕೇಳಿದಾಗ, ಚಾಲಕ ಕೋಪೋದ್ರಿಕ್ತನಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ, ಪ್ರಯಾಣಿಕರು ವಿಡಿಯೋ ಚಿತ್ರೀಕರಿಸದಂತೆ ಮಾಡಲು ಕೇಬಿನ್ ಹಾಗೂ ಬಸ್ ಒಳಗಿನ ದೀಪಗಳನ್ನು ಆರಿಸಿದ್ದಾನೆ.

ಮೈಸೂರು ಟೋಲ್ ಪ್ಲಾಜಾ ಬಳಿ ಬಸ್ ನಿಂತಾಗ, ಪ್ರಯಾಣಿಕರು “ಈ ಸ್ಥಿತಿಯಲ್ಲಿ ಬಸ್ ಓಡಿಸಬೇಡಿ” ಎಂದು ಒತ್ತಾಯಿಸಿದರು. ಆಗ ಚಾಲಕ ಕ್ಯಾಬಿನ್‌ನಿಂದ ಮದ್ಯದ ಬಾಟಲಿಯೊಂದಿಗೆ ಇಳಿದು ಓಡಿಹೋಗಿದ್ದಾನೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಘಟನೆ ನಂತರ ಬಸ್ ಸೇವೆ ಬಹಳ ತಡವಾಗಿ ಪುನರಾರಂಭವಾದರೂ, ಟ್ರಾವೆಲ್ಸ್ ಕಂಪನಿ ಮರು ದಿನವೂ ಇದೇ ಚಾಲಕನನ್ನು ಸೇವೆಗೆ ನಿಯೋಜಿಸಿದ್ದಾಗಿ ಪ್ರಯಾಣಿಕರು ಆರೋಪಿಸಿದ್ದಾರೆ.