ಕಸ್ಟಮ್ಸ್ ಶುಲ್ಕದ ನೆಪದಲ್ಲಿ 13.38 ಲಕ್ಷ ರೂ. ವಂಚನೆ : ಎಫ್‌ಐಆರ್ ದಾಖಲು

ಮಂಗಳೂರು: ಕಸ್ಟಮ್ಸ್ ಶುಲ್ಕ ಪಾವತಿಸಬೇಕು ಎಂದು ಸುಳ್ಳು ಹೇಳಿ 13.38 ಲಕ್ಷ ರೂ. ಗಳನ್ನು ಮೋಸದಿಂದ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್‌ಬುಕ್‌ನಲ್ಲಿ ಫೆಬ್ರವರಿ ತಿಂಗಳಿನಲ್ಲಿ ಲಂಡನ್‌ನ ಲಿಲ್ಲಿಯನ್ ಮೇರಿ ಜಾರ್ಜ್ ಎಂಬಾಕೆಯ ಪರಿಚಯವಾಗಿದ್ದು, ಬಳಿಕ ಆಕೆಯೊಂದಿಗೆ ಚಾಟಿಂಗ್ ಮಾಡಲಾರಂಭಿಸಿದೆ. ಆಕೆ ನವೆಂಬರ್‌ನಲ್ಲಿ ಹಣ ತೆಗೆದುಕೊಂಡು ಭಾರತಕ್ಕೆ ಬರುವುದಾಗಿ ತಿಳಿಸಿದ್ದಳು. ಅದರಂತೆ ನ.15ರಂದು ಸೊನಾಲಿ ಗುಪ್ತ ಎಂಬ ಅಪರಿಚಿತ ಮಹಿಳೆ ಕರೆ ಮಾಡಿ ಲಂಡನ್ ಮಹಿಳೆ ಲಿಲ್ಲಿಯನ್ ಮೇರಿ ಜಾರ್ಜ್ ಮುಂಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ.

ಅವರು 25,000 ಪೌಂಡ್ಸ್ ಮತ್ತು 1 ಕೆ.ಜಿ. ಚಿನ್ನವನ್ನು ತಂದಿದ್ದು ಭಾರತದ ರೂಪಾಯಿ ಮೌಲ್ಯದಲ್ಲಿ ಪೌಂಡ್ಸ್‌ಗೆ ಸುಮಾರು 30 ಲಕ್ಷ ರೂ. ಆಗುತ್ತದೆ ಎಂದಿದ್ದಳು. ಬಳಿಕ ಆ ಕರೆಯನ್ನು ಲಿಲ್ಲಿಯನ್‌ಗೆ ಕೊಟ್ಟಿದ್ದಳು. ಲಿಲ್ಲಿಯನ್ ಮಾತನಾಡಿ, ಪೌಂಡ್ಸ್ ಕುರಿತು ಎಕ್ಸ್ ಚೇಂಜ್ ರಿಜಿಸ್ಟ್ರೇಷನ್, ಡಿಸ್ಕೌಂಟ್ ಚಾರ್ಜಸ್, ಕಸ್ಟಮ್ಸ್ ಡಿಕ್ಲರೇಷನ್ ಫಾರ್ಮ್ ನಲ್ಲಿ ನಮೂದಿಸದೆ ಇರುವ ಬಗ್ಗೆ, ಮನಿ ಲ್ಯಾಂಡರಿಂಗ್ ಚಾರ್ಜ್ ಮತ್ತಿತರ ಕಾರಣಗಳನ್ನು ತಿಳಿಸಿ ಬೇರೆ ಬೇರೆ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿ ಹಣ ಪಾವತಿಸಲು ತಿಳಿಸಿದ್ದು, ಆ ಹಣವನ್ನು ಭೇಟಿ ಮಾಡುವ ಸಮಯದಲ್ಲಿ ನೀಡುವುದಾಗಿ ಹೇಳಿ ನಂಬಿಸಿದ್ದಾಳೆ.

ಅದರಂತೆ ತಾನು ನ.15ರಿಂದ 18ರವರೆಗೆ ಹಂತ ಹಂತವಾಗಿ 13,38,900 ರೂ. ವರ್ಗಾಯಿಸಿದ್ದೇನೆ. ಬಳಿಕ ತಾನು ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಎರಡು ದಿನದಲ್ಲಿ ನೀಡುವುದಾಗಿ ಲಿಲ್ಲಿಯನ್ ತಿಳಿಸಿದ್ದಾಳೆ. ಬಳಿಕ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿರುವುದು ತಿಳಿದು ಬಂದಿದೆ ಎಂದು ಹಣ ಕಳಕೊಂಡವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

error: Content is protected !!