ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕತ್ವ ಬದಲಾವಣೆ ಅಂತಿಮ ಘಟ್ಟ ತಲುಪಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣಗಳ ಚಟುವಟಿಕೆಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಪಕ್ಷದ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಬೆಂಬಲಿಗರು ದೆಹಲಿಗೆ ತೆರಳಿ, ಸಿದ್ದು ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಲು ಒತ್ತಡ ಹೇರುವ ತಂತ್ರ ರೂಪಿಸಿದ್ದಾರೆ. ನಮ್ಮಲ್ಲಿ ನಾಯಕತ್ವ ಗೊಂದಲ ಇದೆ ಎಂದು ಸ್ವತಃ ಪಕ್ಷವು ಸ್ವತಃ ಒಪ್ಪಿಕೊಂಡಿರುವುದರಿಂದ ಇದಕ್ಕೆ ಸಂಪೂರ್ಣ ವಿರಾಮ ನೀಡಬೇಕು ಎಂದು ಸಿದ್ದರಾಮಯ್ಯ ಗುಂಪು ಪಟ್ಟು ಹಿಡಿದಿದೆ.
ಇದೇ ವೇಳೆ, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಡಿ.ಕೆ. ಶಿವಕುಮಾರ್ ಪರವಾಗಿ ಯಾವುದೇ ಸೂಚನೆ ನೀಡಿದರೂ, ಸಿದ್ದರಾಮಯ್ಯ ಬಣ ಮತ್ತೊಂದು ರಣತಂತ್ರ ಹೆಣೆಯಲು ಮುಂದಾಗಿರುವ ಮಾಹಿತಿ ಮೂಲಗಳಿಂದ ಲಭಿಸಿದೆ. ಅದೇ ಹೊಸ ಮುಖಕ್ಕೆ ಸಿಎಂ ಪಟ್ಟ ಕಟ್ಟುವುದು!
ಪಕ್ಷವು ನಾಯಕತ್ವ ಬದಲಾವಣೆಗೆ ಒತ್ತಾಯಿಸಿದರೆ, ಪರ್ಯಾಯ ಅಭ್ಯರ್ಥಿಗಳ ಪಟ್ಟಿ ಕೂಡ ಸಿದ್ದರಾಮಯ್ಯ ಬಣದಿಂದ ರೆಡಿ ಆಗಿದೆ. ಅದರಲ್ಲೂ ಗೃಹ ಸಚಿವ ಮತ್ತು ಹಿರಿಯ ದಲಿತ ನಾಯಕ ಡಾ. ಜಿ. ಪರಮೇಶ್ವರ್ ಅವರ ಹೆಸರು ವಿಶೇಷವಾಗಿ ಕೇಳಿಬರುತ್ತಿದೆ. ʻನಾನು ಯಾವಾಗಲೂ ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿದ್ದೇನೆʼ ಎಂದು ಈಗಾಗಲೇ ಹೇಳಿಕೆ ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ರಹಸ್ಯ ಸಭೆಯಲ್ಲಿ ರಣತಂತ್ರ!
ಪಿಡಬ್ಲ್ಯೂಡಿ ಸಚಿವ ಮತ್ತು ಸಿದ್ದರಾಮಯ್ಯರ ಆತ್ಮೀಯ ವಲಯದಲ್ಲಿ ಗುರುಸಿಕೊಂಡಿರುವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಪರ್ಯಾಯ ಅಭ್ಯರ್ಥಿಯ ಹೆಸರನ್ನು ತೇಲಿಬಿಡುವ ಕಾರ್ಯತಂತ್ರ ಅಂತಿಮಗೊಂಡಿದೆ ಎಂದು ಹೇಳಲಾಗುತ್ತಿದೆ.
ಖರ್ಗೆ–ಗಾಂಧಿ ಕುಟುಂಬ ನಡುವೆ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಇಂದು ಅಥವಾ ನಾಳೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ದೆಹಲಿಗೆ ಕರೆಯಲಾಗುವ ಸಾಧ್ಯತೆಯಿದೆ.
ಶಿವಕುಮಾರ್‌ನ ಎಚ್ಚರಿಕೆ ನಡೆ
ಡಿ.ಕೆ. ಶಿವಕುಮಾರ್ ಈವರೆಗೂ ರಾಜಕೀಯವಾಗಿ ಸಮತೋಲನದ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಆದರೆ, ಮಧ್ಯಂತರ ಒಪ್ಪಂದದ ಬಗ್ಗೆಯೂ ನೀಡಿದ ಭರವಸೆಯನ್ನು ಕಾಪಾಡಬೇಕುʼ ಎಂಬ ನಿಗೂಢ ಹೇಳಿಕೆಯ ಮೂಲಕ ಹೈಕಮಾಂಡ್‌ಗೆ ಸಂದೇಶವನ್ನೂ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಈ ಬಾರಿ ಮುಖ್ಯಮಂತ್ರಿ ಬದಲಾವಣೆ ಪಕ್ಕಾ ಆಗಿದ್ದು, ಆದರೆ ಅದು ಡಿಕೆಶಿ ಪಾಲಾಗುತ್ತದಾ ಅಥವಾ ಅನ್ಯರ ಪಾಲಾಗುತ್ತಾ ಎನ್ನುವುದು ಈಗಿರುವ ಕುತೂಹಲ.
2023ರಲ್ಲಿ ನಡೆದಿದ್ದ ಒಪ್ಪಂದ!
2023ರ ಭರ್ಜರಿ ಗೆಲುವಿನ ಬೆನ್ನಲ್ಲೇ ಕಾಂಗ್ರೆಸ್ ಸಿದ್ದರಾಮಯ್ಯ–ಶಿವಕುಮಾರ್ ಬಣಗಳ ನಡುವೆ ಸಿಎಂ ಹುದ್ದೆಗಾಗಿ ಕಿತ್ತಾಟ ಪ್ರಾರಂಭವಾಗಿತ್ತು. ಎರಡೂ ಕಡೆಯವರೂ ತಾವು ಮುಖ್ಯಮಂತ್ರಿಯಾಗಲು ಅರ್ಹರು ಎಂದು ಭಾವಿಸಿದ್ದು, ಅಂತಿಮವಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಯಿತು. ‘ಒಬ್ಬ ವ್ಯಕ್ತಿ – ಒಂದು ಹುದ್ದೆ’ ನಿಯಮವನ್ನು ತಾತ್ಕಾಲಿಕವಾಗಿ ತಡೆಹಿಡಿದು, ಡಿ.ಕೆ. ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯೂ ರಾಜ್ಯ ಘಟಕದ ಅಧ್ಯಕ್ಷರಾಗಿ ಉಳಿಸಲಾಯಿತು. ಆಗಲೇ 2.5-2.5 ವರ್ಷಗಳ ಅಧಿಕಾರ ಹಂಚಿಕೆಯ ಒಪ್ಪಂದವನ್ನೂ ಮಾಡಲಾಗಿತ್ತು. ಆ ಒಪ್ಪಂದದ ಪ್ರಕಾರ ಸಿದ್ದು ತಮ್ಮ ಅಧಿಕಾರವನ್ನು ಡಿಕೆಶಿಗೆ ಹಸ್ತಾಂತರಿಸಬೇಕಿತ್ತು.

ಕರ್ನಾಟಕ ರಾಜಕೀಯದಲ್ಲಿ ಈ ನಾಯಕತ್ವ ಪೈಪೋಟಿ ಮುಂದಿನ ಗಂಟೆಗಳಲ್ಲಿ ಹೊಸ ತಿರುವು ಪಡೆಯುವ ಸಾಧ್ಯತೆ ಇದ್ದು, ದೆಹಲಿಯ ನಿರ್ಧಾರವೇ ಎರಡೂ ಬಣಗಳ ಭವಿಷ್ಯ ನಿರ್ಧರಿಸಲಿದೆ. ಅಂತಿಮವಾಗಿ ಇಬ್ಬರ ಜಗಳ ಮೂರನೆಯವನಿಗೆ ಲಾಭ ಆದರೂ ಅಚ್ಚರಿಪಡಬೇಕಿಲ್ಲ!