ಬೆಂಗಳೂರು: ರಾಜ್ಯದಲ್ಲಿ ಮದ್ಯದ ಮೇಲೆ ಸತತ ದರ ಏರಿಕೆ ಮಾಡಿದ ಪರಿಣಾಮ ಇದೀಗ ಕುಡಿಯೋರು ಪರ್ಯಾಯ ಮಾರ್ಗಗಳತ್ತ ಮುಖಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದು ಅಬಕಾರಿ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ.

ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಒದಗಿಸಲು ಸರ್ಕಾರ ಕಳೆದ ಒಂದು ವರ್ಷದಲ್ಲಿ ಮದ್ಯದ ದರವನ್ನು ಹಲವು ಬಾರಿ ಹೆಚ್ಚಿಸಿದ ಪರಿಣಾಮ, ಮದ್ಯಪ್ರಿಯರು ಗಾಂಜಾ ಮತ್ತು ಅಫೀಮು ಮಾದಕ ದ್ರವ್ಯಗಳ ಬಳಕೆಗೆ ತಿರುಗಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.
ಈ ಪರ್ಯಾಯ ಬಳಕೆ ಹೆಚ್ಚಾದ ಪರಿಣಾಮ ಮದ್ಯದ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ. 2024ರಲ್ಲಿ ಬಿಯರ್ ಹಾಗೂ ಐಎಂಎಲ್ ಸೇರಿ ಒಟ್ಟು ಮಾರಾಟವು ಗಣನೀಯವಾಗಿದ್ದರೂ, ಈ ವರ್ಷ ಮಾರಾಟವು 30% ರಷ್ಟು ಕುಸಿದಿದೆ. ಬಿಯರ್ ಮಾರಾಟದಲ್ಲೇ 51 ಲಕ್ಷ ಬಾಕ್ಸ್‌ಗಳಷ್ಟು ಇಳಿಕೆ ದಾಖಲಾಗಿದೆ. ಐಎಂಎಲ್ ಮಾರಾಟವೂ 4.36 ಲಕ್ಷ ಬಾಕ್ಸ್ ಕುಸಿತ ಕಂಡಿದೆ.
ಮದ್ಯದ ದರ ಹೆಚ್ಚಿದಂತೆ, ಕಡಿಮೆ ವೆಚ್ಚದಲ್ಲಿ ಲಭ್ಯವಾಗುವ ಗಾಂಜಾ-ಅಫೀಮು ಬಳಕೆ ಯುವಕರಲ್ಲಿ ಹೆಚ್ಚಳ ಕಂಡಿರುವುದಾಗಿ ಅಬಕಾರಿ ವಲಯದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಮದ್ಯ ಮಾರಾಟದಲ್ಲಿ ಕುಸಿತ ಕಂಡುಬರುತ್ತಿದ್ದರೂ, ಮಾದಕ ವಸ್ತುಗಳ ಹಾವಳಿ ಹೆಚ್ಚುತ್ತಿರುವುದು ಕಾನೂನು ಹಾಗೂ ಆರೋಗ್ಯದ ದೃಷ್ಟಿಯಿಂದ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಅಬಕಾರಿ ಇಲಾಖೆಯ ಆದಾಯ ಗುರಿ ಈ ವರ್ಷ ತಲುಪುವುದು ಕಷ್ಟವಾಗಲಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ.
