ಬೆಂಗಳೂರು/ದೆಹಲಿ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಭಾರೀ ಚರ್ಚೆ, ಊಹಾಪೋಹಗಳು ನಡೆಯುತ್ತಿದೆ. ಇದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯಿಂದಾಗಿ ರಾಜ್ಯದಲ್ಲಿ ಸಿಎಂ ಬದಲಾವಣೆ ನಡೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ʻರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಅಧಿಕಾರ ಹಂಚಿಕೆ ವಿವಾದದ ಬಗ್ಗೆ ಪಕ್ಷದ ಹೈಕಮಾಂಡ್ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆʼ ಎಂದು ಖರ್ಗೆ ನೀಡಿರುವ ಹೇಳಿಕೆ ಇಡೀ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ANI ಗೆ ಮಾತನಾಡಿದ ಖರ್ಗೆ “ಕರ್ನಾಟಕ ಸರ್ಕಾರದ ಕಾರ್ಯಪದ್ಧತಿ ಬಗ್ಗೆ ಅಲ್ಲಿನ ಜನರಿಗೆ ಜ್ಞಾನವಿದೆ. ರಾಜ್ಯದಲ್ಲಿ ಕಾಣಿಸಿಕೊಂಡಿರುವ ಗೊಂದಲವನ್ನು ಪರಿಹರಿಸಲು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ನಾನು ಸೇರಿ ಚರ್ಚಿಸುತ್ತೇವೆ. ಅಗತ್ಯವಾದರೆ ಮಧ್ಯಸ್ಥಿಕೆಯನ್ನು ಕೊಡುತ್ತೇವೆ.” ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರವು ನವೆಂಬರ್ 20ರಿಂದ ಎರಡೂವರೆ ವರ್ಷ ಪೂರೈಸಿದ್ದು, 2023ರಲ್ಲಿ ನಡೆದಿರಬಹುದಾದ ‘ಅಧಿಕಾರ ಹಂಚಿಕೆ ಒಪ್ಪಂದ’ದ ಚರ್ಚೆ ಮತ್ತೆ ಗರಿಗೆದರಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಎರಡೂವರೆ- ಎರಡೂವರೆ ವರ್ಷಗಳ ಒಪ್ಪಂದವಿದ್ದು, ಇದರ ಪ್ರಕಾರ ಸಿದ್ದು ತನ್ನ ಹುದ್ದೆಯನ್ನು ಡಿಕೆಶಿಗೆ ಹಸ್ತಾಂತರಿಸಬೇಕು. ಹೀಗಾಗಿ ಮುಂದಿನ ದಿನಗಳಲ್ಲಿ ಏನು ನಡೆಯುತ್ತಿದೆ ಎನ್ನುವುದು ತೀರಾ ಕುತೂಹಲ ಮೂಡಿಸಿದೆ.
ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಕನಕಪುರ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಐದು–ಆರು ಕಾಂಗ್ರೆಸ್ ನಾಯಕರ ನಡುವೆ “ರಹಸ್ಯ ಒಪ್ಪಂದ”ವಿದೆ ಎಂದಿದ್ದು, ಪಕ್ಷವನ್ನು ಮುಜುಗರಕ್ಕೀಡುಮಾಡಬಾರದು ಎಂಬ ಕಾರಣಕ್ಕೆ ಅದರ ವಿವರ ಬಹಿರಂಗಪಡಿಸಲು ಹಿಂಜರಿದಿದ್ದರು.