ಶಬರಿಮಲೆ: ಶಬರಿಮಲೆ ಯಾತ್ರಾ ಕಾಲ ಈಗಾಗಲೇ ಆರಂಭವಾದರೂ, ಪಿಡಬ್ಲ್ಯೂಡಿ ಇಲಾಖೆ ಇನ್ನೂ ಪೂರ್ವಸಿದ್ಧತೆಗಳನ್ನು ನಡೆಸಿಲ್ಲ, ಯಾತ್ರಾ ಪಥದಲ್ಲಿ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಇದು ಯಾತ್ರಿಕ ಅಸಮಾಧಾನಕ್ಕೆ ಕಾರಣವಾಗಿದೆ.

ಯಾತ್ರಾಪಥಗಳ ಪಕ್ಕದಲ್ಲಿರುವ ಕಾಡನ್ನು ಸ್ವಲ್ಪ ಮಟ್ಟಿಗೆ ತೆರವುಗೊಳಿಸಿರುವುದನ್ನು ಹೊರತುಪಡಿಸಿ, ಇತರೆ ಎಲ್ಲಾ ಅಗತ್ಯ ಸಿದ್ಧತೆಗಳು ಇನ್ನೂ ಆರಂಭವಾಗಿಲ್ಲ. ಸಾಮಾನ್ಯವಾಗಿ ಅಪಘಾತ ನಿವಾರಣೆಗೆ ಪಥಗಳ ಬದಿಯಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಮಾರ್ಗಸೂಚಿ ರೇಖೆಗಳು ಹಾಕಲಾಗುತ್ತಿತ್ತು. ಆದರೆ ಈ ಬಾರಿ ಅವನ್ನು ನವೀಕರಿಸುವ ಕೆಲಸ ನಡೆದಿಲ್ಲ. ಹಳೆಯ ಗುರುತುಗಳು ಮಸುಕಾಗಿರುವುದರಿಂದ ದಾರಿಯ ಅಂಚು ಸ್ಪಷ್ಟವಾಗಿ ಕಾಣುತ್ತಿಲ್ಲ ಎಂದು ಅಲ್ಲಿಗೆ ಹೋಗಿ ಬಂದಿರುವ ಯಾತ್ರಿಕರು ಅಸಾಮಾಧಾನ ತೋಡಿಕೊಂಡಿದ್ದಾರೆ.

ಪಥದಲ್ಲಿ ಅಳವಡಿಸಿದ್ದ ಟ್ರಾಫಿಕ್ ಸಿಗ್ನಲ್‌ಗಳು, ಅಪಘಾತ ಎಚ್ಚರಿಕಾ ಬೋರ್ಡ್‌ಗಳು, ದಿಕ್ಕು ಸೂಚನಾ ಫಲಕಗಳು ಹಲವು ಕಡೆಗಳಲ್ಲಿ ಮಸುಕಾಗಿದ್ದು ಓದಲು ಅಸಾಧ್ಯವಾಗಿದೆ. ಇದರಿಂದ ರಾತ್ರಿ ವೇಳೆಯಲ್ಲಿ ಆಗಮಿಸುವ ಯಾತ್ರಿಕರು ದಿಕ್ಕು ತಪ್ಪಿ ಅಲೆದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ರಸ್ತೆ ಸುರಕ್ಷತಾ ಪ್ರಾಧಿಕಾರ ಅಳವಡಿಸಿದ್ದ ಬ್ಲಿಂಕರ್ ದೀಪಗಳು ಕೂಡಾ ಹಲವೆಡೆ ಕಾರ್ಯರಹಿತವಾಗಿದ್ದು, ಪಥದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
ಯಾತ್ರಿಕರ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ತಕ್ಷಣ ಅಗತ್ಯ ರಿಪೇರಿ ಹಾಗೂ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವಂತೆ ಯಾತ್ರಿಕರು ಸಂಬಂಧಿತ ಇಲಾಖೆಗೆ ಮನವಿ ಮಾಡಿದ್ದಾರೆ.