ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಪದವು ಹನುಮಾನ್ ಮಂದಿರ ಬಳಿ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಯುವಕನ ಮೇಲೆ ಮತ್ತೊಂದು ಸ್ಕೂಟರ್ ನಲ್ಲಿ ಬಂದವರು ದಾಳಿಗೆ ಯತ್ನಿಸಿರುವ ಘಟನೆ ಇಂದು(ನ.24) ಸಂಜೆ ನಡೆದಿದೆ.

ಪೂಪಾಡಿಕಲ್ಲು ನಿವಾಸಿ ಅಖಿಲೇಶ್(28) ಗಾಯಾಳು.
ಯುವಕನ ಕೈಯ ಭಾಗಕ್ಕೆ ಗಾಯಗಳಾಗಿದ್ದು ಮೂಡಬಿದ್ರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬಜ್ಪೆ ಪೊಲೀಸರು ಧಾವಿಸಿದ್ದಾರೆ.
ಘಟನೆಯ ಕುರಿತಂತೆ ಲಭಿಸಿರುವ ಮಾಹಿತಿ ಪ್ರಕಾರ, ಒಂದೇ ಬೈಕ್‌ನಲ್ಲಿ ನಾಲ್ವರು ಯುವಕರು ಚೂರಿಗಳನ್ನು ಹಿಡಿದು ಸಂಚರಿಸುತ್ತಿರುವುದನ್ನು ಅಖಿಲೇಶ್ ಗಮನಿಸಿದ್ದಾರೆ. ವಿಷಯವನ್ನು ವಿಡಿಯೋ ಮಾಡಲು ಅವರು ಬೈಕ್ ಅನ್ನು ಹಿಂಬಾಲಿಸಿದಾಗ, ಆ ನಾಲ್ವರಲ್ಲಿ ಒಬ್ಬನು ಚೂರಿಯನ್ನು ಬೀಸಿ ಬೆದರಿಸಿದ ಪರಿಣಾಮ ಅಖಿಲೇಶ್ ಅವರ ಕೈಗೆ ಗಾಯವಾಗಿದೆ.
ಘಟನೆಯ ನಂತರ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಸ್ಥಳೀಯರು ಚುರುಕಾಗಿ ಪ್ರತಿಕ್ರಿಯಿಸಿ ಒಬ್ಬ ಆರೋಪಿ ಯುವಕರನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಉಳಿದ ಮೂವರು ಆರೋಪಿಗಳ ಗುರುತು ಪತ್ತೆಯಾಗಿದ್ದು, ಶೀಘ್ರ ಬಂಧಿಸುವುದಾಗಿ ಕಮೀಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಘಟನೆಯ ಮೊದಲು ಆರೋಪಿಗಳು ಬಾರ್‌ನಿಂದ ಹೊರಬರುತ್ತಿರುವ ದೃಶ್ಯ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದ್ದು, ಮದ್ಯದ ಪ್ರಭಾವದಲ್ಲಿದ್ದಾರೆಯೇ ಅಥವಾ ಯಾವುದೇ ಮಾದಕ ವಸ್ತು ಸೇವನೆ ಮಾಡಿದ್ದಾರೆಯೇ ಎಂಬುದನ್ನು ತನಿಖಾ ತಂಡ ಪರಿಶೀಲಿಸುತ್ತಿದೆ.
ಘಟನೆಯ ಗಂಭೀರತೆಯನ್ನು ಮನಗಂಡ ಹಿರಿಯ ಅಧಿಕಾರಿಗಳು ಸ್ವತಃ ಕೇಸಿನ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಮೂವರ ಬಂಧನಕ್ಕೆ ಶೀಘ್ರದಲ್ಲೇ ಕ್ರಮ ಜರುಗಲಿದೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರೋಪಿಗಳು ಮಾರಕಾಸ್ತ್ರಗಳನ್ನು ಹಿಡಿದು ಎಲ್ಲಿಗೆ ಹೋಗುತ್ತಿದ್ದರು ಎಂದು ತಿಳಿದುಬಂದಿಲ್ಲ. ಎಡಪದವು ವ್ಯಾಪ್ತಿಯಲ್ಲಿ ಪೊಲೀಸರು ಬಿಗಿಬಂದೋಬಸ್ತ್ ವಹಿಸಿಕೊಂಡಿದ್ದಾರೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ.