ಸುರತ್ಕಲ್ : ಕಾವೂರು ಗ್ರಾಮ ಸಹಾಯಕರ ಕಚೇರಿ ನಾ ದುರಸ್ತಿಯಲ್ಲಿದ್ದು ಯಾವುದೇ ಕ್ಷಣದಲ್ಲಿ ಕುಸಿಯುವ ಸ್ಥಿತಿಯಲ್ಲಿದೆ. 40 ವರ್ಷ ಹಳೇದಾದ ಹಂಚಿನ ಮಾಡಿನ ಕಟ್ಟಡ ಇದಾಗಿದ್ದು, ಮರದ ಪಕ್ಕಾಸು, ರೀಪು ಗೆದ್ದಲು ತಿಂದು ಹಂಚುಗಳು ನೇತಾಡುತ್ತಿದೆ. ಕಿಟಕಿಯ ಗಾಜು ಒಡೆದು ಹೋಗಿ ಮಳೆ ನೀರು ಒಳಗೆ ಸೋರುತ್ತಿದೆ. ಮಳೆ ಜೋರಾಗಿ ಬಂದರೆ ಕಡತಗಳು ಮಳೆ ನೀರಲ್ಲಿ ನೆನೆದುಹೋಗುವ ಸ್ಥಿತಿ ಇಲ್ಲಿದೆ.








ದಿನನಿತ್ಯ ಈ ಕಚೇರಿಗೆ ಹಲವಾರು ಮಂದಿ ಬರುತ್ತಿತ್ತು, ಜನರಿಗೆ ಕುಳಿತುಕೊಳ್ಳಲು ಇಲ್ಲಿ ಸಾಕಷ್ಟು ಸ್ಥಳಾವಕಾಶವು ಇಲ್ಲ. ಗ್ರಾಮ ಸಹಾಯಕರ ಕಚೇರಿ ಹತ್ತಲು ಸರಿಯಾದ ಮೆಟ್ಟಿಲಿನ ವ್ಯವಸ್ಥೆಯೂ ಇಲ್ಲ. ಹಿರಿಯ ನಾಗರಿಕರು ಕಚೇರಿಗೆ ಆಗಮಿಸಲು ಇನ್ನೊಬ್ಬರ ಸಹಾಯ ಅಗತ್ಯವಾಗಿ ಬೇಕಾಗಿದೆ..
ಈ ಹಿಂದೆ ಇದೇ ಭಾಗದಲ್ಲಿ ನೀರಿನ ಟ್ಯಾಂಕ್ ಒಂದು ಬೀಳುವ ಸ್ಥಿತಿಯಲ್ಲಿದ್ದಾಗ ಹಲವಾರು ಬಾರಿ ಮನವಿಯ ಬಳಿಕ ಕೆಡವಿ ಹಾಕಲಾಗಿತ್ತು. ಇದೀಗ ಈ ಕಟ್ಟಡದ ದುಸ್ಥಿತಿಯು ಇಂದು ನಾಳೆಯೋ ಎಂಬಂತೆ ಇದೆ. ಗ್ರಾಮ ಸಹಾಯಕರು, ಗ್ರಾಮ ಕರಣಿಕರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಜೋರಾಗಿ ಮಳೆ ಗಾಳಿ ಬಂದಾಗ ಆತಂಕದಿಂದಲೇ ಒಳಗೆ ಕುಳಿತುಕೊಂಡು ಕೆಲಸ ಮಾಡುವ ಸ್ಥಿತಿಯಿದೆ.
ಗ್ರಾಮ ಸಹಾಯಕರ ಹೊಸ ಕಚೇರಿ ಕಟ್ಟಡ ಆಗುವ ತನಕ ಕಾವೂರಿನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಮಾರುಕಟ್ಟೆ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರವಾಗಲು ಸೂಚನೆ ಸಿಕ್ಕಿತ್ತು. ಆದರೆ ಮಾರುಕಟ್ಟೆ ಕಟ್ಟಡದಲ್ಲೂ ಸಾರ್ವಜನಿಕರು ಭೇಟಿಯ ಸಂದರ್ಭ ಸ್ಥಳಾವಕಾಶದ ಕೊರತೆ ಎದುರಾಗುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ಕಾವೂರು ಜಂಕ್ಷನ್‌ನಲ್ಲಿರುವ ಗ್ರಾಮ ಸಹಾಯಕರ ಕಚೇರಿಯನ್ನು ಹೊಸದಾಗಿ ನಿರ್ಮಿಸಿಕೊಡಬೇಕು. ಸಾರ್ವಜನಿಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು, ಕಚೇರಿಗೆ ಹತ್ತುವ ಮೆಟ್ಟಿಲುಗಳನ್ನು ಸಮರ್ಪಕವಾಗಿ ನಿರ್ಮಿಸಬೇಕು. ಗ್ರಾಮ ಸಹಾಯಕರ ನೂತನ ಕಟ್ಟಡ ಆಗುವವರಿಗೆ ಸದ್ಯದ ಕಟ್ಟಡಕ್ಕೆ ದುರಸ್ತಿ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತೆ ಫೇಲ್ಸಿ ರೇಗೋ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.
ಈ ಹಿಂದೆ ಗ್ರಾಮ ಸಹಾಯಕರ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ನಡೆದಿದ್ದಾದರೂ ಹಣಕಾಸಿನ ಅಡಚಣೆಯಿಂದ ಆಗಿಲ್ಲ. ಇನ್ನಾದರೂ ಇಲ್ಲಿನ ಗ್ರಾಮ ಸಹಾಯಕರ ಕಚೇರಿಗೆ ಹೊಸ ಕಟ್ಟಡ ಭಾಗ್ಯ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.

