ಶಾಸ್ತ್ರೀಯ ರಾಗ–ತಾಳಗಳ ರಸದೌತಣ:‌ ಮಂಗಳೂರಿನಲ್ಲಿ ಮೂರ್ದಿನ ಸಂಗೀತ ನಿನಾದ

ಮಂಗಳೂರು: ಸಂಗೀತ ಪರಿಷತ್ ಮಂಗಳೂರು (ರಿ) ಆಶ್ರಯದಲ್ಲಿ, ಭಾರತೀಯ ವಿದ್ಯಾಭವನ ಹಾಗೂ ರಾಮಕೃಷ್ಣ ಮಠ, ಮಂಗಳೂರು ಇವರುಗಳ ಸಹಯೋಗದಲ್ಲಿ “ಮಂಗಳೂರು ಸಂಗೀತೋತ್ಸವ – 2025” ನವೆಂಬರ್ 28ರಿಂದ 30ರವರೆಗೆ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ಹೇಳಿದರು.

ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಸಂಗೀತೋತ್ಸವವನ್ನು ನವೆಂಬರ್ 28ರಂದು ಸಂಜೆ 5.00 ಗಂಟೆಗೆ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಅವರ ದಿವ್ಯ ಸಾನ್ನಿಧ್ಯದಲ್ಲಿ, ಶ್ರೀಕ್ಷೇತ್ರ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕೇಸರರಾದ ಶರವು ರಾಘವೇಂದ್ರ ಶಾಸ್ತ್ರಿ ಉದ್ಘಾಟಿಸಲಿದ್ದಾರೆ. ಸಂಗೀತ ಪರಿಷತ್ ಗೌರವಾಧ್ಯಕ್ಷ ಡಾ. ಸಿ.ಆರ್. ಬಲ್ಲಾಳ್ ಮತ್ತು ಅಧ್ಯಕ್ಷ ಹೆಚ್. ಸುಬ್ರಹ್ಮಣ್ಯ ರಾವ್ ಉಪಸ್ಥಿತರಿರಲಿದ್ದಾರೆ ಎಂದರು.


ಅತಿಥಿಗಳಾಗಿ ರಾಘವೇಂದ್ರ ಎಸ್. ಭಟ್ (ಕರ್ಣಾಟಕ ಬ್ಯಾಂಕ್), ಮಂಜುನಾಥ ಬಿ. ಸಿಂಗೈ (ಕೆನರಾ ಬ್ಯಾಂಕ್), ರಾಜೇಂದ್ರ ಕುಮಾರ್ (ಯೂನಿಯನ್ ಬ್ಯಾಂಕ್), ಕೃಷ್ಣ ಹೆಗ್ಡೆ (ONGC–MRPL), ಸಿಎ ಕೆ. ರಾಮದಾಸ ರಾವ್ ಭಾಗವಹಿಸಲಿದ್ದಾರೆ.

ಮೃದಂಗ ಗುರು ರುಷೋತ್ತಮ ಪುಣಿಂಚತಾಯ (ಕಾಸರಗೋಡು ಪುಂಡೂರು) ಇವರನ್ನು ಗೌರವಿಸಲಾಗುವುದು. ದತ್ತಿ ನಿಧಿ ವಿಜೇತ ಯುವ ಪ್ರತಿಭೆಗಳಾದ ಕಾರ್ತಿಕ್ ಇನ್ನಂಜೆ ಮತ್ತು ಕೂ. ಧನಶ್ರೀ ಶಬರಾಯ ಅವರಿಗೆ ಯುವ ಪ್ರತಿಭಾ ಪ್ರಶಸ್ತಿಗಳು ಪ್ರದಾನವಾಗಲಿವೆ. ಜೂನಿಯರ್ ಮತ್ತು ಸೀನಿಯರ್ ವರ್ಗದ ಸಂಗೀತ ಸ್ಪರ್ಧೆಗಳಲ್ಲಿ ವಿಜೇತರಾಗಿರುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಲಿದೆ. ಸಂಗೀತೋತ್ಸವದಲ್ಲಿ ಹೆಸರಾಂತ ಹಾಗೂ ಉದಯೋನ್ಮುಖ ಯುವ ಕಲಾವಿದರ ಕಚೇರಿಗಳು ಆಯೋಜಿಸಲಾಗಿದ್ದು, ಸಂಗೀತಾಸಕ್ತರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಪರಿಷತ್ ಮಂಗಳೂರು ಉಪಾಧ್ಯಕ್ಷ ಎಂ.ವಿ. ಪ್ರದೀಪ್, ಕಾರ್ಯದರ್ಶಿ ಸುಬ್ರಹ್ಮಣ್ಯ ಉಡುಪ, ಖಜಾಂಚಿ ಎ. ಮೋಹನದಾಸ್ ಹಾಗೂ ಸದಸ್ಯ ಎ. ರಂಗನಾಥ್ ಉಪಸ್ಥಿತರಿದ್ದರು.

error: Content is protected !!