ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಸತ್ಯವನ್ನು ಬೆಳಕಿಗೆ ತರುವ ಉದ್ದೇಶದಿಂದ “ಕೊಂದವರು ಯಾರು?” ಅಭಿಯಾನವು ಡಿಸೆಂಬರ್ 16ರಂದು ಬೆಳ್ತಂಗಡಿಯಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನ ಸದಸ್ಯೆಯರು ಘೋಷಿಸಿದರು.

ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ದೆಹಲಿಯ ನಿರ್ಭಯಾ ಪ್ರಕರಣ ನಡೆದ ದಿನವಾದ ಡಿಸೆಂಬರ್ 16 ಅನ್ನು ಮಹಿಳಾ ಸಂಘಟನೆಗಳು ದೇಶವ್ಯಾಪಿ ‘ಅತ್ಯಾಚಾರ ವಿರೋಧಿ ದಿನ’ವೆಂದು ಆಚರಿಸುತ್ತಿವೆ. ಇದೇ ಹಿನ್ನೆಲೆಯಲ್ಲಿ ಅದೇ ದಿನ ಬೆಳ್ತಂಗಡಿಯ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದರು.
ಮಹಿಳೆಯರ ಹಕ್ಕುಗಳು ಮತ್ತು ಸುರಕ್ಷತೆಗಾಗಿ ದಶಕಗಳಿಂದ ಕೆಲಸ ಮಾಡುತ್ತಿರುವ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಸೇರಿ “ಕೊಂದವರು ಯಾರು?” ಎಂಬ ರಾಜ್ಯವ್ಯಾಪಿ ಅಭಿಯಾನವನ್ನು ಆಗಸ್ಟ್‌ನಲ್ಲಿ ಪ್ರಾರಂಭಿಸಿದ್ದಾಗಿ ಹೇಳಿದರು.

ಧರ್ಮಸ್ಥಳದಲ್ಲಿ ನಡೆದ ಮಹಿಳಾ ಅತ್ಯಾಚಾರ–ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಂಪೂರ್ಣ ಎಸ್‌ಐಟಿ ತನಿಖೆ ರಚನೆ ಮಾಡಿ, ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಹೊಣೆಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬೆಳ್ತಂಗಡಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಹಿಳಾ ಜಾಥಾ, ಮಹಿಳಾ ನ್ಯಾಯ ಸಮಾವೇಶ, ಏರ್ಪಡಿಸಲಾಗಿದೆ. ತನಿಖೆ ರಾಜಕೀಯ ಅಥವಾ ಧಾರ್ಮಿಕ ಚರ್ಚೆಗೆ ಒಳಪಡುವಂತಾಗಬಾರದು; ಮಹಿಳೆಯರು ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕಿಸುವುದು ಪ್ರಧಾನ ಗುರಿ ಆಗಬೇಕು ಎಂದು ಅಭಿಯಾನ ಸದಸ್ಯೆಯರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅನಸೂಯಮ್ಮ ಅರಲಾಲುಸಂದ್ರ (ರೈತ ಸಂಘ), ಪ್ರಸನ್ನಾ ರವಿ (ಸಾಮಾಜಿಕ ಕಾರ್ಯಕರ್ತೆ), ಮಲ್ಲಿಗೆ (ಅಭಿಯಾನ ಸದಸ್ಯೆ), ಗೀತಾ ಸುರತ್ಕಲ್ (ಕಲಾವಿದೆ–ಲೇಖಕಿ), ಶಶಿಕಲಾ (ಸೌಜನ್ಯಾ ಹೋರಾಟಗಾರ್ತಿ), ಭಾರತಿ ಪ್ರಶಾಂತ್ (ಆಕ್ಟಿವಿಸ್ಟ್), ಸುನೀತಾ ಲಂಬಾಣಿ (ಭಾಗ್ಯಜ್ಯೋತಿ ಮಹಿಳಾ ಮಂಡಲ, ಮುಲ್ಕಿ) ಮೊದಲಾದವರು ಹಾಜರಿದ್ದರು.
