ಮಂಗಳೂರು: ಬೈಲಾ ತಿದ್ದುಪಡಿ, ನಿಯಮ ಉಲ್ಲಂಘನೆ ಇನ್ನಿತರ ಆರೋಪದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿರುವ ಸಮಾಜ ಸೇವಾ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿಯ 16 ಮಂದಿ ನಿರ್ದೇಶಕರನ್ನು ಸಹಕಾರ ಸಂಘಗಳ ಜಂಟಿ ನಿಬಂಧಕರು (ಮೈಸೂರು ಪ್ರಾಂತ) ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

22-11-2024ರಂದು ಡಿ. ಲೋಕನಾಥ್ ಹಾಗೂ ಇನ್ನೂ ಐದು ಮಂದಿ ಸದಸ್ಯರು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 29(ಸಿ) ಅಡಿ ದೂರು ಸಲ್ಲಿಸಿದ್ದರು. ದೂರು ವಿಚಾರಣೆ ನಡೆಸಿದ ಬಳಿಕ ನಿಯಮ ಉಲ್ಲಂಘನೆ ಸಾಬೀತಾಗಿದೆ ಎಂದು ಮೈಸೂರು ಪ್ರಾಂತದ ಜಂಟಿ ನಿಬಂಧಕರಾದ ಸಿ. ಪ್ರಸಾದ್ ರೆಡ್ಡಿ ಅವರು 16 ಮಂದಿ ನಿರ್ದೇಶಕರನ್ನು ಅಮಾನತು ಆದೇಶ ಜಾರಿಗೊಳಿಸಿದ್ದಾರೆ.
ಅಧ್ಯಕ್ಷ/ನಿರ್ದೇಶಕ ಸುರೇಶ್ ಕುಲಾಲ್, ಉಪಾಧ್ಯಕ್ಷ/ನಿರ್ದೇಶಕ ಪದ್ಮನಾಭ ವಿಟ್ಲ, ನಿರ್ದೇಶಕರುಗಳಾದ ವಿಶ್ವನಾಥ ಕೆ.ಬಿ., ಜನಾರ್ದನ ಬೊಂಡಾಲ, ವಿಜಯಕುಮಾರ್ ವಿ., ಅರುಣ್ ಕುಮಾರ್ ಕೆ., ರಮೇಶ್ ಸಾಲ್ಯಾನ್ ಬಿ., ಸತೀಶ, ಎನ್. ಸುರೇಶ್, ರಮೇಶ್ ಸಾಲ್ಯಾನ್, ನಾಗೇಶ್ ಬಿ., ಜಗನ್ನಿವಾಸಗೌಡ, ಎಂ.ಕೆ. ಗಣೇಶ್ ಸಮಗಾರ ಹಾಗೂ ನಿರ್ದೇಶಕಿಯರಾದ ಜಯಂತಿ, ವಿದ್ಯಾ ಹಾಗೂ ವಿಜಯಲಕ್ಷ್ಮೀ ಅಮಾನತುಗೊಂಡವರು.

ಆರೋಪವೇನು?
01-09-2024ರಂದು ನಡೆಸಿದ ಸರ್ವ ಸದಸ್ಯರ ಸಭೆಯಲ್ಲಿ ಬೈಲಾ ಸಮಗ್ರ ತಿದ್ದುಪಡಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆಯಲಾಗಿದ್ದು, ಈ ಕ್ರಮದಲ್ಲಿ ನಿಯಮಗಳ ಉಲ್ಲಂಘನೆಯಾಗಿರುವುದಾಗಿ ದೂರರ್ಜಿದಾರರು ಆಕ್ಷೇಪಿಸಿ ಆಡಳಿತ ಮಂಡಳಿಯ ವಿರುದ್ಧ ಕ್ರಮಕೈಗೊಳ್ಳ ಬೇಕೆಂದು ದೂರು ನೀಡಲಾಗಿತ್ತು. ಸಂಘದ ಬೈಲಾಗೆ ತರಲಾಗುತ್ತಿರುವ ತಿದ್ದುಪಡಿಯ ಬಗ್ಗೆ ಸದಸ್ಯರಿಗೆ ಮಾಹಿತಿಯನ್ನು ನೀಡದೇ ಸಭೆಯಲ್ಲಿ ತಿದ್ದುಪಡಿಯ ಬಗ್ಗೆ ಚರ್ಚಿಸಲು ಅವಕಾಶವನ್ನು ನೀಡದಿರುವುದು ಮುಂತಾದ ಆರೋಪಗಳು ಕೇಳಿಬಂದಿದ್ದವು.

ಅಲ್ಲದೆ ಸಂಘದ ಆಡಳಿತ ಮಂಡಳಿಯವರು ಸರ್ವ ಸದಸ್ಯರ ಸಭೆಯನ್ನು ನಡೆಸುವ ಪೂರ್ವದಲ್ಲಿ ಮತದಾನದ ಹಕ್ಕುಳ್ಳ ಸದಸ್ಯರ ಪಟ್ಟಿಯನ್ನು ಸಿದ್ಧಪಡಿಸಿ ಸಹಕಾರ ನಿಯಮ ಪಾಲಿಸುವಲ್ಲಿ ವಿಫಲರಾಗಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959, ಪ್ರಕರಣ 29ಸಿ(8)(ಬಿ)ರಡಿ ಹಾಗೂ ಸರ್ಕಾರದ ಅಧಿಸೂಚನೆ ಅನ್ವಯ ಸಂಖ್ಯೆ : ಸಿಒ/71/ಸಿಎಲ್‌ಎಂ/2016 ದಿನಾಂಕ: 06-12-2016ರ ರೀತ್ಯಾ ಪ್ರತ್ಯಾಯೋಜನೆಗೊಂಡ ಅಧಿಕಾರದ ಮೇರೆಗೆ ಸಹಕಾರ ಸಂಘಗಳ ಜಂಟಿ ನಿಬಂಧಕರು, ಮೈಸೂರು ಪ್ರಾಂತದ ಸಿ.ಪ್ರಸಾದ್ ರೆಡ್ಡಿ ಸಮಾಜ ಸೇವಾ ಸಹಕಾರಿ ಸಂಘದ 16 ನಿರ್ದೇಶಕರನ್ನು ಅಧಿಕಾರದಿಂದ ಅಮಾನತುಗೊಳಿಸಿದ್ದಾರೆ.