ದೆಹಲಿ ಸ್ಫೋಟ ಪ್ರಕರಣ- ನಿಗೂಢ ವಿಚಾರಗಳು ಬಹಿರಂಗ: ದೇಶವ್ಯಾಪಿ ಸ್ಫೋಟ ನಡೆಸಲು ವೈಟ್‌ ಕಲರ್‌ ಉಗ್ರರ ಸಂಚು

ನವದೆಹಲಿ: ದೆಹಲಿ ಸ್ಫೋಟ ಪ್ರಕರಣದ ತನಿಖೆ ಮತ್ತಷ್ಟು ನಿಗೂಢ ವಿಚಾರಗಳು ಬಹಿರಂಗಪಡಿಸಿದೆ. ಜೈಶ್-ಎ-ಮೊಹಮ್ಮದ್‌ನ ವೈಟ್–ಕಾಲರ್ ಭಯೋತ್ಪಾದಕ ಮಾಡ್ಯೂಲ್‌ ಭಾರತದೆಲ್ಲೆಡೆ ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಿದ್ದಾಗಿ ಶಂಕಿತ ಉಗ್ರರು ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ. 2023 ರಲ್ಲೇ ಈ ಪಿತೂರಿ ರೂಪಿಸಿದ್ದಾಗಿ ಶಂಕಿತ ಉಗ್ರರು ಒಪ್ಪಿಕೊಂಡಿದ್ದಾರೆ.

ಆತ್ಮಹತ್ಯಾ ಬಾಂಬರ್ ಉಮರ್ ಮೊಹಮ್ಮದ್‌ನ ಸಹಚರ ಡಾ. ಮುಜಮ್ಮಿಲ್ ಶಕೀಲ್, ಕಳೆದ ಎರಡು ವರ್ಷಗಳಿಂದ ಸ್ಫೋಟಗಳಿಗೆ ಬೇಕಾದ ತಯಾರಿಯಲ್ಲಿ ತೊಡಗಿಕೊಂಡಿದ್ದಾಗಿ ತನಿಖೆಯ ವೇಳೆ ಹೇಳಿಕೊಂಡಿದ್ದಾನೆ. ಈ ಅವಧಿಯಲ್ಲಿ ಸ್ಫೋಟಕಗಳು, ರಿಮೋಟ್‌ಗಳು ಹಾಗೂ ಬಾಂಬ್ ತಯಾರಿಕೆಗೆ ಅಗತ್ಯ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲಾಗುತ್ತಿತ್ತು.

ತನಿಖೆಯ ಪ್ರಕಾರ, ಶಕೀಲ್‌ಗೆ ಯೂರಿಯಾ ಮತ್ತು ಅಮೋನಿಯಂ ನೈಟ್ರೇಟ್ ಖರೀದಿಸುವ ಜವಾಬ್ದಾರಿಯನ್ನು ನೀಡಲಾಗಿತ್ತು. ಇವು ಇತರ ಬಾಷ್ಪಶೀಲ(ಪೆಟ್ರೋಲ್‌ ಮಾದರಿ ತಾಪಮಾನ ಹೆಚ್ಚಿದಾಗ ಸುಲಭವಾಗಿ ಆವಿಯಾಗಿ ಹಾರಿಹೋಗುವ) ಸಂಯುಕ್ತಗಳೊಂದಿಗೆ ಬೆರೆಸಿದಾಗ ಹೆಚ್ಚಿನ ಪ್ರಮಾಣದ ಸ್ಫೋಟಕ ಶಕ್ತಿ ನೀಡುವ ಸಾಮರ್ಥ್ಯ ಹೊಂದಿವೆ. ಶಕೀಲ್ ಹರಿಯಾಣದ ಗುರುಗ್ರಾಮ್ ಮತ್ತು ನುಹ್ ಪ್ರದೇಶಗಳಿಂದ 3 ಲಕ್ಷ ರೂ.ಗೆ 26 ಕ್ವಿಂಟಾಲ್‌ NPK ರಸಗೊಬ್ಬರ ಖರೀದಿಸಿರುವುದು ಪತ್ತೆಯಾಗಿದೆ.

ಅವನ ಮತ್ತೊಬ್ಬ ಸಹಚರ ಮೊಹಮ್ಮದ್, ಖರೀದಿಸಲಾದ ರಸಗೊಬ್ಬರವನ್ನು ಸ್ಫೋಟಕವಾಗಿ ಪರಿವರ್ತಿಸಲು ರಾಸಾಯನಿಕ ಮಿಶ್ರಣ ಹಾಗೂ ಸಂಸ್ಕರಣೆಯ ಜವಾಬ್ದಾರಿಯನ್ನು ವಹಿಸಿದ್ದರೆಂದು ತನಿಖೆಯಲ್ಲಿ ಬಹಿರಂಗಪಡಿಸಿದೆ.

ಮೂಲಗಳ ಪ್ರಕಾರ, ದೆಹಲಿ ಸ್ಫೋಟದ ಸಂಪೂರ್ಣ ಪಿತೂರಿ ಈ ಭಯೋತ್ಪಾದಕ ಶಂಕಿತರೇ ರೂಪಿಸಿದ್ದರು. ಸ್ಫೋಟ ಕಾರ್ಯಾಚರಣೆಗೆ ಒಟ್ಟು 26 ಲಕ್ಷ ರೂ. ಹಣ ಸಂಗ್ರಹಿಸಿ ಮೊಹಮ್ಮದ್‌ಗೆ ಹಸ್ತಾಂತರಿಸಲಾಯಿತು. ಇದರಲ್ಲಿ ಮೊಹಮ್ಮದ್ ಸ್ವತಃ 2 ಲಕ್ಷ ರೂ., ಡಾ. ಶಕೀಲ್ 5 ಲಕ್ಷ ರೂ., ಡಾ. ಆದಿಲ್ ರಾಥರ್ 8 ಲಕ್ಷ ರೂ., ಡಾ. ಮುಜಾಫರ್ ರಾಥರ್ 6 ಲಕ್ಷ ರೂ. ಮತ್ತು ಲಕ್ನೋದ ಡಾ. ಶೈನ್ ಸಯೀದ್ 5 ಲಕ್ಷ ರೂ. ದೇಣಿಗೆ ನೀಡಿರುವುದು ಪತ್ತೆಯಾಗಿದೆ.

ಸ್ಫೋಟ ನಡೆದ ದಿನ ಮೊಹಮ್ಮದ್ ಆತ್ಮಹತ್ಯಾ ದಾಳಿ ನಡೆಸಿ ಮೃತಪಟ್ಟರೆ, ಇತರೆ ಶಂಕಿತರ ವಿಚಾರಣೆ ಮುಂದುವರಿದಿದೆ. ತನಿಖಾ ಸಂಸ್ಥೆಗಳು ಈ ಮಾಡ್ಯೂಲ್‌ನಲ್ಲಿ ಇನ್ನೂ ಯಾರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಿವೆ.

error: Content is protected !!