ಮಂಗಳೂರು: ಜಿಲ್ಲಾಡಳಿತ ಕೆಂಪು ಕಲ್ಲು ಗಣಿಗಾರಿಕೆಗೆ ರಾಜ ಧನ ಕಡಿಮೆ ಮಾಡಿದ್ದು ನಿಜ. ಆದರೆ ಈಗ ವಿಧಿಸಿರುವ ನಿಯಮಗಳಿಂದ ಕಲ್ಲಿನ ದರ ಕಡಿಮೆಗೊಳಿಸಲು ಸಾಧ್ಯವಿಲ್ಲ. ಯಾಕೆಂದರೆ ಜಿಲ್ಲೆಯಲ್ಲಿ ಸದ್ಯಕ್ಕೆ 55 ಪರ್ಮಿಟ್‌ಗಳಷ್ಟೇ ಇದ್ದು, ಹೊಸ ಪರ್ಮಿಟ್ ಸಿಗ್ತಾ ಇಲ್ಲ. ಕ್ವಾರಿಯಲ್ಲಿ ಉತ್ತಮ ದರ್ಜೆಯ ಕಲ್ಲುಗಳು ಸಿಗದಿರುವುದರಿಂದ ಕಲ್ಲಿನ ದರ ಇಳಿಕೆ ಮಾಡಲು ಸಾಧ್ಯವಾಗ್ತಾ ಇಲ್ಲ. ಆದರೂ ಮೊದಲಿಗಿಂತ ದರ ಕೊಂಚ ಕಡಿಮೆಯಾಗಿದೆ. ಪರ್ಮಿಟ್ ಜಾಸ್ತಿ ಸಿಕ್ಕ ಬಳಿಕ ಕಲ್ಲಿನ ದರ ಎರಡು ತಿಂಗಳಲ್ಲಿ ಕಡಿಮೆಯಾಗುವ ಲಕ್ಷಣವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೆಂಪು ಕಲ್ಲು ಪಾಯ ಮಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವಿ ರೈ ಪಜೀರು ಹೇಳಿದ್ದಾರೆ.

ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕೆಂಪು ಕಲ್ಲು ಗಣಿಗಾರಿಕೆಯಲ್ಲಿ ಕಾನೂನಾತ್ಮಕ ತೊಡಕುಗಳಿದ್ದ ಕಾರಣ ಕಳೆದೈದು ತಿಂಗಳಲ್ಲಿ ಗಣಿಗಾರಿಕೆ ಸ್ಥಗಿತಗೊಂಡು ಕೂಲಿಕಾರ್ಮಿಕರು ಮಾತ್ರವಲ್ಲದೆ ಇಡೀ ಜಿಲ್ಲೆಯಲ್ಲಿ ಸಮಸ್ಯೆ ಎದುರಾಗಿತ್ತು. ಕೆಂಪು ಕಲ್ಲು ಗಣಿಗಾರಿಕೆಯನ್ನು ಕಾನೂನಾತ್ಮಕವಾಗಿ ನಡೆಸಬೇಕೆಂಬ ಉದ್ದೇಶದಿಂದ ಗಣಿಮಾಲಿಕರು, ಜಿಲ್ಲಾಡಳಿತ, ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚಿತವಾಗಿ ನಿಯಮಾವಳಿಗಳನ್ನು ಪ್ರಾರಂಭಿಸಿ ಸರ್ಕಾರಕ್ಕೆ ರಾಜಧನ ಸಲ್ಲಿಸಿ ಕಟ್ಟಿ ಕೆಂಪುಕಲ್ಲು ಗಣಿಗಾರಿಕೆ ಪ್ರಾಂಭವಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 55 ಪರವಾನಿಗೆ ಆಗಿದೆ. ಆದರೆ ಮಂಗಳೂರು ನಗರಕ್ಕೆ ಹತ್ತಿರದಲ್ಲಿ ಕೇವಲ 12 ಪರ್ಮಿಟ್‌ಗಳು ಮಾತ್ರ ಆಗಿದ್ದು, ಉಳಿದಂತೆ ಸುಳ್ಯ, ಪುತ್ತೂರು, ಮೂಡಬಿದ್ರೆ, ಎಕ್ಕಾರು ಪ್ರದೇಶಗಳಲ್ಲಿ ಆಗಿದೆ. ಆದರೆ ಇದು ನಗರಕ್ಕೆ ದೂರವಾದ ಪ್ರದೇಶವಾಗಿದೆ. ಈ ಹಿಂದಿನ ಸರ್ಕಾರವಿದ್ದಾಗ 262 ಪರವಾನಿಗೆ ಇತ್ತು. ಆದರೆ ಅಷ್ಟೊಂದು ಕಠಿಣ ನಿಯಮಗಳಿರಲಿಲ್ಲ. ಜಿಪಿಎಸ್ ಕಡ್ಡಾರವಿರಲಿಲ್ಲ ಆದರೆ ಈಗಿನ ಸರ್ಕಾರ ನಿಯಮಾವಳಿಗಳನ್ನು ಸ್ವಲ್ಪ ಕಠಿಣವಾಗಿ ಮಾಡಲಾಗಿದ್ದು, ಜಿಪಿಎಸ್ ಕಡ್ಡಾಯಗೊಳಿಸಿರುವುದರಿಂದ ಗಣಿಗಾರಿಕ ಕಠಿಣವಾಗಿದೆ ಎಂದು ಆರೋಪಿಸಿದರು.

ಇದೀಗ ಪರವಾನಿಗೆ ಮಾಡಬೇಕಾದರೆ ಜಿಪಿಎಸ್ ನಕ್ಷೆ ಮಾಡಿ, ಸಂಬಂಧಿಸಿದ ಭೂದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಿ ಅಲ್ಲಿಂದ ಭೂ ಮತ್ತು ಖನಿಜ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಥಳ ನಿಗದಿ ಮಾಡ್ತಾರೆ. ಅಲ್ಲಿ ನಾವು ಕೆಂಪು ಕಲ್ಲು ತೆಗೆಯಲು ಪ್ರಾರಂಭಿಸುತ್ತೇವೆ. ಅಲ್ಲಿ ಉತ್ತಮ ದರ್ಜೆಯ ಕಲ್ಲು ಬರಲಿಲ್ಲ ಅಂದ್ರೆ ಇನ್ನೊಂದು ಜಾಗವನ್ನು ಆಯ್ಕೆ ಮಾಡಲು ಮತ್ತೆ ಅದೇ ರೀತಿಯ ನಿಯಮಾವಳಿಗಳನ್ನು ಅನುಸರಿಸಬೇಕು ಎಂದು ಹೇಳಿದರು.
ಹಿಂದೆ ಕೆಂಪು ಕಲ್ಲು ತೆಗೆದ ಜಾಗದಲ್ಲಿ ಕೃಷಿ ಸಂಬಂಧಿತ ಕೆಲಸಗಳನ್ನು ಮಾಡುತ್ತಿದ್ದರು. ನೀರಿಂಗಿ ಅಂತರ್ಜಲ ವೃದ್ಧಿಯಾಗುತ್ತಿತ್ತು. ಆದರೆ ಈ ಬಾರಿ ಕಡ್ಡಾಯವಾಗಿ ಮಣ್ಣು ತುಂಬಿಸಬೇಕೆಂಬ ನಿಯಮದಿಂದ ಕ್ವಾರಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲು ಸಾಧ್ಯವಾಗ್ತಾ ಇಲ್ಲ ಅಲ್ಲದೆ ಷರತ್ತುಗಳನ್ನು ಮೀರಿದರೆ 15% ದಂಡ ವಿಧಿಸಲಾಗುತ್ತದೆ ಆರೋಪಿಸಿದರು.
ಶಾಸಕರ ಒತ್ತಡದಿಂದ ರಾಜಧನ ಕಡಿಮೆಯಾಗಿ 97 ರೂ ನಿಗದಿಪಡಿಸಲಾಗಿದೆ. ಜಾಗದ ದಾಖಲಾತಿ ಪ್ರಕಾರ ಆರ್‌ಟಿಸಿ, ಜಾಯಿಂಟ್ ಆರ್‌ಟಿಸಿಯಲ್ಲಿರುವ ಎಲ್ಲರ ಒಪ್ಪಿಗೆ ಪಡೆಯಬೇಕಾಗುತ್ತದೆ. ದಾಖಲೆಯಲ್ಲಿರುವವರು ದೂರದಲ್ಲಿದ್ದರೆ ಅಥವಾ ದಾಖಲೆಯಲ್ಲಿ ದೋಷಗಳಿರುವುದರಿಂದ ನಮಗೆ ಹೆಚ್ಚಿನ ಪರವಾನಿಗೆ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ 55 ಪರವಾನಿಗೆ ಪಡೆಯಲು ಸಾಧ್ಯವಾಗಿದೆ. ಪರವಾನಿಗೆ ಜಾಸ್ತಿ ಸಿಕ್ಕಾಗ ಕೆಂಪು ಕಲ್ಲಿನ ದರ ಕಡಿಮೆಯಾಗಬಹುದು ಎಂದು ಭವಿಷ್ಯ ನುಡಿದರು.

ನಮಗೆ ಕಲ್ಲಿನ ದರವನ್ನು ಇಂತಿಷ್ಟೇ ಎಂದು ನಿಗದಿಪಡಿಸಲು ಸಾಧ್ಯವಾಗುವುದಿಲ್ಲ. ಕಲ್ಲಿನಲ್ಲಿ ಬೇರೆ ಬೇರೆ ಕ್ವಾಲಿಟಿಗಳಿವೆ. ಫಸ್ಟ್, ಸೆಕೆಂಡ್, ಥರ್ಡ್ ಎಂಬ ಮೂರು ಕ್ವಾಲಿಟಿಗಳಿದ್ದು, ಉತ್ತಮ ಕಲ್ಲಿಗೆ ರೇಟು ಸ್ವಲ್ಪ ಜಾಸ್ತಿ ಇರಬಹುದು. ಇದಕ್ಕೆ ಟ್ರಾನ್ಸ್‌ಪೋರ್ಟ್ ದರವೂ ಸೇರುತ್ತದೆ. ಹತ್ತಿರದ ಪ್ರದೇಶಕ್ಕೆ ಕಡಿಮೆ ದರದಲ್ಲಿ ಕಲ್ಲು ಸಿಗಬಹುದು. ಲಾರಿ ಮಾಲಿಕರು ಸಾಗಾಟದ ದೂರದ ಆಧಾರದ ಮೇಲೆ ಕಲ್ಲಿನ ದರ ನಿಗದಿಪಡಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ಕ್ವಾರಿ ಮಾಡಿ ಲಾಭ ಮಾಡಿದ್ದಕ್ಕಿಂತ ಲಾಸ್ ಆದವರೇ ಹೆಚ್ಚು. ಸಾಲ ಮಾಡಿ ತೆಗೆದ ಮಿಶಿನರಿಗಳು ಫೈನಾನ್ಸ್‌ನಲ್ಲಿದೆ. 100 ಕಲ್ಲಿನಲ್ಲಿ 40ರಷ್ಟು ವೇಸ್ಟ್ ಆಗುತ್ತದೆ. ಅಲ್ಲದೆ ಕಾರ್ಮಿಕರಿಗೆ ಸಂಬಳವನ್ನೂ ಕೊಡಬೇಕು. ನಾಲ್ಕು ಲೋಡು ಮಾಡುತ್ತಿದ್ದವರು ಇದೀಗ ಒಂದು ಲೋಡ್ ಮಾಡಲೂ ಕಲ್ಲು ಸಿಗುವುದಿಲ್ಲ. ಲೋಡರ್, ಚಾಲಕ ಹೀಗೆ ಎಲ್ಲರಿಗೂ ಸಂಬಳ ಕೊಡಬೇಕು. ನಾವು ಅನೇಕ ಸಮಸ್ಯೆಗಳಿಂದ ಎದುರಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.
ಕಲ್ಲಿನ ದರ ನಿಗದಿ ಮಾಡುವುದು ನಾವಲ್ಲ:

ದಕ ಜಿಲ್ಲಾ ಕೆಂಪು ಕಲ್ಲು ಮಾಲಕರ ಒಕ್ಕೂಟದ ಅಧ್ಯಕ್ಷ ಸತೀಶ್ ಆಚಾರ್ಯ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಈ ಹಿಂದೆ 60 ರೂ ಇದ್ದಾಗ ನಾವು ಕಲ್ಲು ತೆಗೆಯುತ್ತಿರಲಿಲ್ಲ. ಕೇರಳದಿಂದ ಕಲ್ಲು ಬರ್ತಾ ಇತ್ತು. ಅದು ಪರ್ಮಿಷನ್ ಇಲ್ಲದಿದ್ದಾಗ ಇದ್ದ ದರ ಆಗಿತ್ತು ಎಂದರು. ಕ್ವಾಲಿಟಿ ಮೇಲೆ ಕಲ್ಲಿನ ದರ ನಿಗದಿಯಾದರೆ, ಅದಕ್ಕೆ ಸಾಗಾಟ ವೆಚ್ಚ ಕೂಡ ಸೇರುತ್ತದೆ. ಹಾಗಾಗಿ ಇಂಥ ಪ್ರದೇಶಕ್ಕೆ ಇಷ್ಟು ಅಂತ ರೇಟ್ ನಿಗದಿಪಡಿಸಲು ಸಾಧ್ಯವಿಲ್ಲ ಎಂದರು.
ಉತ್ಪಾದನ ವೆಚ್ಚ ರೂ.28

ಜಿಲ್ಲಾ ಉಪಾಧ್ಯಕ್ಷ ರವಿಶಂಕರ್ ಶೇರಿಗಾರ್ ಕಲ್ಲಿನ ದರದ ಬಗ್ಗೆ ಮಾತನಾಡುತ್ತಾ, ಒಂದು ಎಕ್ರೆ ಪ್ರದೇಶದಲ್ಲಿ 16 ಸಾವಿರ ಟನ್ ಮುರಕಲ್ಲು ತೆಗೆಯಲು ಅವಕಾಶವಿದೆ. ಅಂದರೆ ಇದರಲ್ಲಿ 5 ಲಕ್ಷದ 25 ಸಾವಿರ ಇಟ್ಟಿಗೆ ತೆಗೆಯುವುದು ಇಲ್ಲಿರುವ ಲೆಕ್ಕಾಚಾರ. ಇದರಲ್ಲಿ ಪ್ರಥಮ ಹಾಗೂ ದ್ವಿತೀಯ ದರ್ಜೆಯ ಕಲ್ಲು ಬರುತ್ತದೆ. ನಾರ್ಮಲ್ ಆಗಿ ದಿನಕ್ಕೆ ಒಂದು ಕ್ವಾರಿಯಲ್ಲಿ 2000 ಕಲ್ಲು ತೆಗೆಯಲಾಗುತ್ತದೆ. ಉತ್ಪಾದನಾ ವೆಚ್ಚ ರೂ.5, ಇಂಧನ ವೆಚ್ಚ ರೂ.3, ಜೆಸಿಬಿ ರೂ.2, ಮೈಂಟೆನೆನ್ಸ್ 3, ಮಿಶನರಿ ರೂ.1, ಆಫೀಸ್ ವೆಚ್ಚ ರೂ.1, ಬಾಡಿಗೆ ದರ ರೂ.1., ರಾಯಲ್ಟಿ 2.80, ಲೀಸ್ 4.70., ಮಣ್ಣು ತುಂಬಿಸುವ ವೆಚ್ಚ ರೂ. 3 ಸೇರಿ ಕ್ವಾರೆಯಲ್ಲಿ ಒಂದು ಕಲ್ಲಿನ ಉತ್ಪಾದನ ವೆಚ್ಚ ಒಟ್ಟು 28 ರೂ. ಬೀಳುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ರಾಮ ಮೊಗರೋಡಿ, ಬಂಟ್ವಾಳ ವಲಯ ಅಧ್ಯಕ್ಷ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.