ಮಂಗಳೂರಿನಲ್ಲಿ ನವೆಂಬರ್ 23ರಂದು ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಕಾರ್ಯಕ್ರಮ

ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಮರಣ ಸಮಿತಿ ಜಂಟಿಯಾಗಿ ಆಯೋಜಿಸಿರುವ ಸುಂದರ ರಾವ್ ಸಂಸ್ಮರಣಾ ಕಾರ್ಯಕ್ರಮ ಮತ್ತು ಸಂಸ್ಮರಣಾ ಪ್ರಶಸ್ತಿ–2025 ಈ ಬರುವ ನ.23, 2025ರಂದು, ಮಂಗಳೂರಿನ ಕೆನರಾ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಸಂಜೆ 4.30ಕ್ಕೆ ನಡೆಯಲಿದೆ ಎಂದು ಸಮಿತಿಯ ಸದಸ್ಯ ಸತ್ಯನಾರಾಯಣ ತಿಳಿಸಿದ್ದಾರೆ.


ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, 2024ರಲ್ಲಿ ಹಿರಿಯ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿಯವರಿಗೆ ನೀಡಲಾದ ಪ್ರಶಸ್ತಿ, ಈ ಬಾರಿ ಹಿರಿಯ ಭಾಗವತ ಶ್ರೀ ಪುತ್ರಿಗೆ ರಘುರಾಮ ಹೊಳ್ಳ ಅವರಿಗೆ ಪ್ರದಾನವಾಗಲಿದೆ. ಪ್ರಶಸ್ತಿಯಲ್ಲಿ ಸನ್ಮಾನ ಪತ್ರ ಹಾಗೂ ₹25,000 ನಗದು ಒಳಗೊಂಡಿದೆ. ಕಾರ್ಯಕ್ರಮದಲ್ಲಿ ಡಾ. ನಾ. ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಮರಣ ಭಾಷಣವನ್ನು ಯಕ್ಷಗಾನ ವಿಮರ್ಶಕ ಡಾ. ಪ್ರಭಾಕರ ಜೋಶಿ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಯಶೀಲ ಅಡ್ಯಂತಾಯ, ನಾಟಕಕಾರ ನವೀನ್ ಶೆಟ್ಟಿ ಅಳಕೆ ಮತ್ತು ಡೀನ್ ಗೋಪಾಲಕೃಷ್ಣ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.

ಸಭಾ ಕಾರ್ಯಕ್ರಮದ ನಂತರ ಸಂಜೆ 6.00ರಿಂದ 8.00ರವರೆಗೆ, ಕಲಾವಿದರ ಕೂಡುವಿಕೆಯಲ್ಲಿ ‘ಅಂಗದ ಸಂಧಾನ’ ಯಕ್ಷಗಾನ ತಾಳಮದ್ದಳೆ ಪ್ರದರ್ಶನ ನಡೆಯಲಿದೆ. ಹಿಮ್ಮೇಳ – ಭಾಗವತರು: ಡಾ. ಪ್ರಖ್ಯಾತ್ ಶೆಟ್ಟಿ, ಚೆಂಡೆ: ಸತ್ಯಜಿತ್ ರಾಯಿ, ಮದ್ದಳೆ: ಸಮರ್ಥ್ ಉಡುಪ
ಮುಮ್ಮೇಳ – ಅರ್ಥದಾರಿಗಳು: ಸರ್ಪಂಗಳ ಈಶ್ವರ ಭಟ್, ಸದಾಶಿವ ಆಳ್ವ ತಲಪಾಡಿ ಇರಲಿದ್ದಾರ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಸನ್ನ, ಹಾಗೂ ರಂಗಸಂಗಾತಿಯಿಂದ ನಾಗೇಶ್ ಶೆಟ್ಟಿ ಬಜಾಲ್, ಸುರೇಶ್ ಬಟ್ಟೆ, ರಂಜನ್ ಬೋಳೂರು ಮತ್ತು ಚಂದ್ರಶೇಖರ್ ಕೂಳೂರು ಉಪಸ್ಥಿತರಿದ್ದರು.

error: Content is protected !!