ಕುಂದಾಪುರ: ಸಾೖಬ್ರಕಟ್ಟೆಯಲ್ಲಿರುವ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟಾ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾೖಬ್ರಕಟ್ಟೆ ನಿವಾಸಿ ಸುರೇಶ್ ಭಟ್ (38) ಬಂಧಿತ ಆರೋಪಿ.
ಸುರೇಶ್ ಭಟ್ ಕಾವಡಿ ಶಾಖೆಯ ಪ್ರಭಾರ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಜೊತೆ ಶಾಖೆಯ ಕಿರಿಯ ಗುಮಾಸ್ತ ಹರೀಶ್ ಕುಲಾಲ್ ಅವರು ಸಂಘದಿಂದ 1.70 ಕೋಟಿ ರೂ. ಗಳನ್ನು ದುರುಪಯೋಗಪಡಿಸಿಕೊಂಡು ನಂತರ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಉಡುಪಿ ಡಿವೈಎಸ್‌ಪಿ ಪ್ರಭು ಡಿ. ಟಿ. ಮತ್ತು ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ, ಕೋಟಾ ಪೊಲೀಸ್ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಮತ್ತು ಮಾಂತೇಶ್ ಜಬಗೌಡ, ಹಾಗೂ ಸಿಬ್ಬಂದಿಗಳಾದ ಕೃಷ್ಣ ಶೇರಿಗಾರ್, ಶ್ರೀಧರ್ ಮತ್ತು ವಿಜಯೇಂದ್ರ ಅವರನ್ನೊಳಗೊಂಡ ತಂಡವು ಆರೋಪಿಯನ್ನು ಬಂಧಿಸಿದೆ. ಮತ್ತೊಬ್ಬ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.