ನವದೆಹಲಿ: ದೆಹಲಿ ಕೆಂಪು ಕೋಟೆಯ ಬಳಿ ನಡೆದ ಭೀಕರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಶಂಕಿತ ಉಗ್ರ ಡಾ. ಮುಜಮ್ಮಿಲ್ ಶಕೀಲ್ ವಿಚಾರಣೆಯ ವೇಳೆ ದೇಶದಲ್ಲಿ ಗಣರಾಜ್ಯ ದಿನ ಅಥವಾ ದೀಪಾವಳಿಯಂದು ದೊಡ್ಡ ಮಟ್ಟದ ಭಯೋತ್ಪಾದಕ ಸಂಚು ನಡೆಸಿರುವ ಕುರಿತು ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.

ಮೂಲಗಳ ಪ್ರಕಾರ, ಮುಜಮ್ಮಿಲ್ ಹಾಗೂ ಶಂಕಿತ ಆತ್ಮಹತ್ಯಾ ಬಾಂಬರ್ ಡಾ. ಉಮರ್ ನಬಿ ಈ ವರ್ಷದ ಆರಂಭದಲ್ಲೇ ಅಂದರೆ ಜನವರಿ 26ರ ಗಣರಾಜ್ಯೋತ್ಸವದ ದಿನದಂದೇ ದಾಳಿ ನಡೆಸುವ ಯೋಜನೆ ರೂಪಿಸಿದ್ದರು. ಅದರ ಪೂರ್ವಭಾವಿ ಅವರು ಕೆಂಪು ಕೋಟೆ ಪ್ರದೇಶದ ಪರಿಶೀಲನೆ ನಡೆಸಿದ್ದರು ಎಂದು ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ.
ತನಿಖಾ ಸಂಸ್ಥೆಗಳ ಪ್ರಕಾರ, ಡಾ. ಮುಜಮ್ಮಿಲ್ 2025ರ ಜನವರಿಯ ಮೊದಲ ವಾರದಲ್ಲೇ ಕೆಂಪು ಕೋಟೆ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡಿದ್ದ. ಅಲ್ಲಿಯೇ ಆತ ಮೊಬೈಲ್ ಲೊಕೇಶನ್, ಇನ್ನಿತಡ ಡೇಟಾ ಸಂಗ್ರಹಿಸಿರುವುದು ದೃಢಪಡಿಸಿದೆ. ವಿಚಾರಣೆಯ ವೇಳೆ ಮುಜಮ್ಮಿಲ್, ಡಾ. ಉಮರ್ ಜೊತೆಗೆ ದೆಹಲಿ ಮತ್ತು ಕೆಂಪು ಕೋಟೆ ಸುತ್ತಮುತ್ತಲಿನ ಸ್ಪಷ್ಟ ಗುರಿಗಳನ್ನು ಗುರುತಿಸಿದ್ದರು ಎಂದು ಒಪ್ಪಿಕೊಂಡಿದ್ದಾರೆ.
![]()
ಗಣರಾಜ್ಯೋತ್ಸವದಂದು ದಾಳಿಗೆ ಸಂಚು
ಮೂಲಗಳ ಪ್ರಕಾರ, ಉಗ್ರರು ಆರಂಭದಲ್ಲಿ ಜನವರಿ 26ರಂದು ಗಣರಾಜ್ಯೋತ್ಸವದಂದು ದಾಳಿ ನಡೆಸುವ ಯೋಜನೆ ರೂಪಿಸಿದ್ದರು. ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಫರಿದಾಬಾದ್ ಮಾಡ್ಯೂಲ್ ಸದಸ್ಯರು ಈ ಬಗ್ಗೆ ಮಾತುಕತೆ ನಡೆಸಿದ್ದರು.
ದೀಪಾವಳಿಯಂದು ದಾಳಿಗೆ ಯೋಜನೆ
ಗಣರಾಜ್ಯೋತ್ಸವದಂದು ಸ್ಫೋಟಿಸಲು ಸಾಧ್ಯವಾಗದ ಕಾರಣ ದೀಪಾವಳಿಯ ಸಮಯದಲ್ಲಿ ಜನಸಮೂಹ ಇರುವ ಮಾರುಕಟ್ಟೆಯಲ್ಲಿ ದಾಳಿ ನಡೆಸುವ ಯೋಜನೆ ರೂಪಿಸಿದ್ದಾಗಿ ಬಂಧಿತ ಮುಜಮ್ಮಿಲ್ ವಿಚಾರಣೆಯಲ್ಲಿ ಬಹಿರಂಗಗೊಂಡಿದೆ. ಫರಿದಾಬಾದ್‌ನಲ್ಲಿ ಇವರ ಸಂಚು ವಿಫಲಗೊಂಡ ಹಿನ್ನೆಲೆಯಲ್ಲಿ ಉಮರ್ ನಬಿ ತರಾತುರಿಯಲ್ಲಿ ಕೆಂಪು ಕೋಟೆಯಲ್ಲಿ ಸ್ಫೋಟ ನಡೆಸಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಮುಜಮ್ಮಿಲ್ ಯಾರು?
ಫರಿದಾಬಾದ್‌ನ ಅಲ್-ಫಲಾಹ್ ಮೆಡಿಕಲ್ ಕಾಲೇಜಿನ ಹಿರಿಯ ವೈದ್ಯ ಡಾ. ಮುಜಮ್ಮಿಲ್ ಶಕೀಲ್ ಭದ್ರತಾ ಸಂಸ್ಥೆಗಳು ಗುರುತಿಸಿದ ನಾಲ್ವರು ಪ್ರಮುಖ ಸಂಚುಕೋರರಲ್ಲಿ ಒಬ್ಬರು. ಜೊತೆಗೆ ಡಾ. ಉಮರ್ ನಬಿ, ಡಾ. ಅದೀಲ್ ಅಹ್ಮದ್ ರಾಥರ್ ಮತ್ತು ಡಾ. ಶಾಹೀನ್ ಶಾಹಿದ್ ಕೂಡ ಇದ್ದಾರೆ.
ಮೂಲಗಳ ಪ್ರಕಾರ, ಮುಜಮ್ಮಿಲ್‌ನನ್ನು ಫರಿದಾಬಾದ್‌ನಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ವೇಳೆ ಬಂಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ 350 ಕೆ.ಜಿ. ಸ್ಫೋಟಕಗಳು ಮತ್ತು ಎಕೆ-47 ರೈಫಲ್‌ಗಳು ವಶಪಡಿಸಲ್ಪಟ್ಟಿವೆ.

ಮುಜಮ್ಮಿಲ್ ಧೌಜ್ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಅಲ್ಲಿ ಅಮೋನಿಯಂ ನೈಟ್ರೇಟ್ ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಈ ಕಾರ್ಯಾಚರಣೆಯನ್ನು ಜಮ್ಮು–ಕಾಶ್ಮೀರ, ಹರಿಯಾಣ ಮತ್ತು ಗುಪ್ತಚರ ಬ್ಯೂರೋ (ಐಬಿ) ಜಂಟಿಯಾಗಿ ನಡೆಸಿದೆ.
500 ಅಧಿಕಾರಿಗಳ ವಿಶೇಷ ತಂಡವು 10/11 ದೆಹಲಿ ಸ್ಫೋಟದ ಶಂಕಿತರ ಚಲನವಲನಗಳನ್ನು ನಕ್ಷೆ ಮಾಡಲು 1,000 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಮತ್ತು ಮೊಬೈಲ್ ಟವರ್ ಡೇಟಾ ವಿಶ್ಲೇಷಣೆ ನಡೆಸುತ್ತಿದೆ.

ಜೈಶ್ ಸಂಪರ್ಕದ ಬಗ್ಗೆ ಎನ್ಐಎ ತನಿಖೆ
ಸ್ಫೋಟ ಪ್ರಕರಣವನ್ನು ಈಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಹಿಸಿಕೊಂಡಿದ್ದು, ಜೈಶ್-ಎ-ಮೊಹಮ್ಮದ್ ಸಂಘಟನೆಯ ಪಾಕಿಸ್ತಾನ ಸಂಪರ್ಕಗಳು ಹಾಗೂ ಹಣಕಾಸು ವ್ಯವಹಾರಗಳ ಹಾದಿಗಳನ್ನು ಪರಿಶೀಲಿಸುತ್ತಿದೆ. ಮೂಲಗಳ ಪ್ರಕಾರ, ಭಾರತದಲ್ಲಿ ಜೆಇಎಂನ ಮಹಿಳಾ ವಿಭಾಗದ ಮುಖ್ಯಸ್ಥೆ ಎಂದು ನಂಬಲಾದ ಡಾ. ಶಾಹೀನ್ ಶಾಹಿದ್, ಲಕ್ನೋ, ಕಾನ್ಪುರ ಮತ್ತು ಸಹರಾನ್‌ಪುರದಲ್ಲಿ ಮಹಿಳೆಯರನ್ನು ನೇಮಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾಳೆ.
ಸೋಮವಾರ ಸಂಜೆ 6:52ಕ್ಕೆ ಲಾಲ್ ಕ್ವಿಲಾ ಮೆಟ್ರೋ ನಿಲ್ದಾಣದ ಗೇಟ್ ನಂ.1 ಬಳಿ ಬಿಳಿ ಹುಂಡೈ ಐ20 ಕಾರು ಸ್ಫೋಟಗೊಂಡು ಕನಿಷ್ಠ 12 ಮಂದಿ ಸಾವನ್ನಪ್ಪಿ, 25 ಮಂದಿ ಗಾಯಗೊಂಡಿದ್ದರು. ಸ್ಫೋಟ ನಡೆಸಿದ್ದ ಡಾ. ಉಮರ್ ನಬಿ ಕೂಡಾ ಸಾವನ್ನಪ್ಪಿದ್ದು, ಅವರ ಡಿಎನ್‌ಎ ಪರೀಕ್ಷೆ ಮೂಲಕ ಗುರುತನ್ನು ದೃಢಪಡಿಸಲಾಗಿದೆ. ಪ್ರಾಥಮಿಕ ವಿಧಿವಿಜ್ಞಾನ ವರದಿಯ ಪ್ರಕಾರ, ಅಮೋನಿಯಂ ನೈಟ್ರೇಟ್‌ನ ಅವಶೇಷಗಳು ಸ್ಫೋಟ ಸ್ಥಳದಲ್ಲಿ ಪತ್ತೆಯಾಗಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತನಿಖಾ ಸಂಸ್ಥೆಗಳಿಗೆ ಪ್ರತಿಯೊಬ್ಬ ಅಪರಾಧಿಯನ್ನು ಬೇಟೆಯಾಡಿ, ಭಯೋತ್ಪಾದಕ ಸಂಚಿನ ಹಿಂದಿರುವವರನ್ನು ನ್ಯಾಯಕ್ಕೆ ತರಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.