ನವೆಂಬರ್ 16ರಂದು‌ ಕಟೀಲು ಏಳನೆಯ ಮೇಳದ ಪಾದಾರ್ಪಣೆ : ವೈಭವದ ಮೆರವಣಿಗೆಗೆ ಸಜ್ಜು

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆಶ್ರಯದಲ್ಲಿನ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳನೆಯ ಮೇಳದ ಪಾದಾರ್ಪಣೆ ನವೆಂಬರ್ 16ರಂದು ನಡೆಯಲಿದೆ ಎಂದು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನವೆಂಬರ್ 15ರಂದು ಮಧ್ಯಾಹ್ನ 3 ಗಂಟೆಗೆ ಬಜಪೆಯಿಂದ ಎಂಟು ಸ್ತಬ್ಧಚಿತ್ರಗಳಲ್ಲಿ ದೇವರ ಪರಿಕರಗಳು, ಕಿರೀಟಗಳು, ತೊಟ್ಟಿಲು, ಚಿನ್ನ-ಬೆಳ್ಳಿಯ ಆಯುಧಗಳನ್ನು ವೈಭವದ ಮೆರವಣಿಗೆಯಲ್ಲಿ ಕಟೀಲಿಗೆ ತರಲಾಗುವುದಾಗಿ ಹೇಳಿದರು. ಈ ಪರಿಕರಗಳ ಮೌಲ್ಯ ಸುಮಾರು ಒಂದು ಕೋಟಿ ರೂಪಾಯಿ ಆಗಿದ್ದು, ಭಕ್ತರಿಂದ ಕಾಣಿಕೆ ನೀಡಲಾಗಿದೆ.

ಬಜಪೆಯಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮೆರವಣಿಗೆಯನ್ನು ಉದ್ಘಾಟಿಸಲಿದ್ದು, ಮಾನವ ಹಕ್ಕು ಆಯೋಗದ ಅಧ್ಯಕ್ಷ ಶ್ಯಾಂ ಭಟ್, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶಾಸಕ ಉಮಾನಾಥ ಕೋಟ್ಯಾನ್, ಮಿಥುನ್ ರೈ ಹಾಗೂ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.

ಮೆರವಣಿಗೆಯಲ್ಲಿ ಸುಮಾರು 15 ರಿಂದ 20 ಸಾವಿರ ಭಕ್ತರ ಭಾಗವಹಿಸುವ ನಿರೀಕ್ಷೆಯಿದೆ. ವೇದಘೋಷ, ಚೆಂಡೆ ತಂಡಗಳು, ವಾದ್ಯ, ಕೊಂಬು, ಹುಲಿವೇಷ, ಭಜನೆಗೋಷ್ಠಿ ಸೇರಿದಂತೆ ವೈಭವದ ಮೆರವಣಿಗೆಯು ಎಕ್ಕಾರಿನಿಂದ ಕಟೀಲುವರೆಗೆ ನಡೆಯಲಿದೆ.

ಧಾರ್ಮಿಕ ವಿಧಿಗಳ ಅಂಗವಾಗಿ ನವೆಂಬರ್ 14ರಂದು ಚಂಡಿಕಾಹೋಮ, ಗಣಯಾಗ, ನವೆಂಬರ್ 16ರಂದು ಪೂಜಾ ಕಿರೀಟಗಳ ಸ್ಥಾಪನೆ, ತಾಳಮದ್ದಲೆ, ಗೆಜ್ಜೆ ಕಟ್ಟುವುದು ಸೇರಿದಂತೆ ಮೇಳದ ಆರಂಭದ ವಿಧಿಗಳು ನಡೆಯಲಿವೆ. ಸಂಜೆ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಾಂಸ್ಕೃತಿಕ ಸಚಿವ ಶಿವರಾಜ ತಂಗದಗಿ, ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

✅Business Offer✅: TUZHAR ಸುಗಂಧ ದ್ರವ್ಯದೊಂದಿಗೆ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. 💰ಕಡಿಮೆ ಹೂಡಿಕೆ, 📦ಕಚ್ಛಾವಸ್ತು ಪೂರೈಕೆ, 📈 ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಜೊತೆ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಿ. 📲 +918088947906 🌐 www.tuzharperfumes.com

ಶಿಕ್ಷಣ, ಅನ್ನದಾನ ಹಾಗೂ ಕಲಾಸೇವೆಯಲ್ಲೂ ಕಟೀಲು ಕ್ಷೇತ್ರ ಮಾದರಿ ಆಗಿದ್ದು, ವರ್ಷಕ್ಕೆ ₹10 ಕೋಟಿ ವೆಚ್ಚದಲ್ಲಿ ಶಿಕ್ಷಣ ಯೋಜನೆಗಳು ನಡೆಯುತ್ತಿವೆ. ದೇವಸ್ಥಾನದಲ್ಲಿ ಪ್ರತಿದಿನ ಮೂರು ಹೊತ್ತು ಅನ್ನಪ್ರಸಾದ ಮತ್ತು ಗೋಷಾಲೆಗಳ ನಿರ್ವಹಣೆಯೂ ಆಗುತ್ತಿದೆ. ಏಳನೆಯ ಮೇಳದ ಪಾದಾರ್ಪಣೆಯ ಅಂಗವಾಗಿ ‘ಯಕ್ಷ ಸಪ್ತಾಹ’ ಆಯೋಜಿಸಲಾಗಿದ್ದು, ಕಲಾವಿದರ ಸಮಾವೇಶ, ಕಟೀಲು ಮೇಳಗಳ ಇತಿಹಾಸ ದಾಖಲಾತಿ, ಛಾಯಾಚಿತ್ರ ಪ್ರದರ್ಶನ, ವಿಚಾರ ಸಂಕಿರಣ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಯಕ್ಷಗಾನ ಪ್ರಚಾರಕರ ಸಂವಾದ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಸಮಿತಿ ಅಧ್ಯಕ್ಷರು, ಕೊಡೆತ್ತೂರುಗುತ್ತು ಸನತ್‌ ಕುಮಾರ ಶೆಟ್ಟಿ, ಆನುವಂಶಿಕ ಮೊತ್ತೇಸರರು ಹಾಗೂ ಆನುವಂಶಿಕ ಅರ್ಚಕ ವಾಸುದೇವ ಆಸ್ರಣ್ಣ, ಅನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಬಿಪಿನ್‌ಚಂದ್ರ ಶೆಟ್ಟಿ, ಕೊಡೆತ್ತೂರುಗುತ್ತು ಹಾಗೂ ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು.

error: Content is protected !!