ಬೆಳ್ತಂಗಡಿ: ಮಡಂತ್ಯಾರುವಿನ ಮಚ್ಚಿನ ಗ್ರಾಮದ ತಾರೆಮಾರು ಸೇತುವೆ ಬಳಿ ಮಾಂತ್ರಿಕರು ಯಾರಿಗೋ ಮಾಟ(ವಾಮಾವಾರ) ಮಾಡಿದ್ದು, ಊರಿನವರು ಆತಂಕಕ್ಕೆ ಒಳಗಾಗಿದ್ದಾರೆ. ಸೇತುವೆಯ ಬಳಿ ವಾಮಾಚಾರಕ್ಕೆ ಬಳಸಿದ ಕ್ಷುದ್ರ ವಸ್ತುಗಳು ಉಪೇಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕರನ್ನು ಕಂಗಾಲಾಗುವಂತೆ ಮಾಡಿದೆ.

ಮಾಂತ್ರಿಕರು ಮಧ್ಯರಾತ್ರಿ ಈ ಜಾಗಕ್ಕೆ ಆಗಮಿಸಿ ದುಷ್ಟ ಶಕ್ತಿಗಳ ಉಪಾಸನೆ ಮಾಡಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಯಾರನ್ನು ದೃಷ್ಟಿಯಲ್ಲಿರಿಸಿ ಈ ರೀತಿ ಮಾಟ ಮಾಡಲಾಗಿದೆ ಎಂದು ತಿಳಿಯದೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಮಂತ್ರಿಸಿದ ತೆಂಗಿನಕಾಯಿ, ದುಷ್ಟ ಶಕ್ತಿಗಳಿಗೆ ಬಲಿ ಕೊಡುವಂತೆ ಕುಂಬಳಕಾಯಿ, ದುಷ್ಟಶಕ್ತಿಯ ಅವಗಾಹನೆ ಮಾಡಿಸಲೆಂದು ಸಂಕೇತಿಸಿದ ಕಲಾಕೃತಿಗಳು, ಒಡೆದ ತೆಂಗಿನ ಕಾಯಿ, ವಿಚಿತ್ರ ಬಣ್ಣದಿಂದ ಕೂಡಿದ ನೀರು ಪತ್ತೆಯಾಗಿದೆ. ಈ ಜಾಗವನ್ನೇ ಮಾಂತ್ರಿಕರು ಅಡ್ಡೆಯನ್ನಾಗಿ ಮಾಡಿದ್ದು, ಪ್ರತಿದಿನವೂ ಇಲ್ಲಿ ದುಷ್ಟ ಶಕ್ತಿಗಳ ಆರಾಧನೆ, ಮಾಟ ಪ್ರಯೋಗದಂತಹ ಉಪಾಸನೆಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ.
ಹೀಗಾಗಿ ಈ ಸ್ಥಳದಲ್ಲಿ ಸಂಚರಿಸುವ ನಾಗರಿಕರು ಮುಖ್ಯವಾಗಿ ಶಾಲಾ ಮಕ್ಕಳು ಈ ದಾರಿಯಲ್ಲಿ ನಡೆದುಕೊಂಡು ಹೋಗಲು ಭಯ ಪಡುತ್ತಿದ್ದಾರೆ. ಪರಿಸರದಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಮಾಂತ್ರಿಕರಿಗೆ ದಿಗ್ಬಂಧನ ವಿಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
