ಪುತ್ತೂರು: ಆರೋಪಿಯೊಬ್ಬನಿಗೆ ಜಾಮೀನು ಕೊಡಿಸುವ ಸಲುವಾಗಿ ನಕಲಿ ಪಹಣಿಪತ್ರ (ಆರ್‌ಟಿಸಿ) ಸಲ್ಲಿಸಿ ನ್ಯಾಯಾಲಯಕ್ಕೆ ವಂಚನೆ ಎಸಗಿದ ಪ್ರಕರಣದಲ್ಲಿ ಪುತ್ತೂರು ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಪಡುವನ್ನೂರು ನಿವಾಸಿ ಅಬ್ದುಲ್ ಹಾಶೀಮ್ (34) ಬಂಧಿತ ಆರೋಪಿ.
ಪುತ್ತೂರು ನಿವಾಸಿಯೋರ್ವರ ಜಮೀನಿನ ಪಹಣಿಪತ್ರವನ್ನು ಆರೋಪಿ ತನ್ನ ಹೆಸರಿನ ಜಮೀನಿನ ದಾಖಲೆ ಎಂದು ಬಿಂಬಿಸಿ, ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದ. ಇದನ್ನೇ ಆಧಾರವಾಗಿಟ್ಟುಕೊಂಡು ಆರೋಪಿಯೋರ್ವನಿಗೆ ಜಾಮೀನು ಕೊಡಿಸಿ ನ್ಯಾಯಾಲಯಕ್ಕೆ ವಂಚಿಸಿದ್ದಾಗಿ ಪೊಲೀಸರು ಮಾಹಿತಿನ ನೀಡಿದ್ದಾರೆ.

ಈ ಕುರಿತಂತೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ 84/2025ರಂತೆ ಕಲಂ 417, 419, 467, 468, 471 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು, ಆರೋಪಿಯು ನಕಲಿ ದಾಖಲೆ ಸೃಷ್ಟಿಸಿ, ಕೃತಕ ಸಹಿ ಮಾಡಿದ್ದು, ನ್ಯಾಯಾಲಯಕ್ಕೆ ತಪ್ಪು ಮಾಹಿತಿಯ ಮೂಲಕ ಭದ್ರತಾ ಪತ್ರ (security bond) ಸಲ್ಲಿಸಿರುವುದನ್ನು ಸಹ ಪತ್ತೆಹಚ್ಚಿದ್ದಾರೆ.
ಅಬ್ದುಲ್ ಹಾಶೀಮ್ ನನ್ನು ಗುರುವಾರ ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೊಬ್ಬನನ್ನು ಜೈಲಿನಿಂದ ಬಿಡಿಸಲು ಹೋದ ಆರೋಪಿ ಈಗ ತಾನೇ ಜೈಲು ಸೇರುವಂತಾಗಿದೆ.