ಕಾಸರಗೋಡು: ಕಾಸರಗೋಡಿನ ಎರಿಕುಲಂ ವಲಿಯಪರಂಬುವಿನ ಬಂಡೆಯ ಮೇಲಿಂದ ಇತಿಹಾಸಪೂರ್ವ ಅಂದರೆ ಬರೋಬ್ಬರಿ 12000 ವರ್ಷಗಳ ಹಿಂದಿನ ಶಿಲಾ ವರ್ಣಚಿತ್ರ(prehistoric rock art) ಹೊಸ ಪತ್ತೆಯಾಗಿದೆ. ಐತಿಹಾಸಿಕ ಗ್ರಂಥಗಳಲ್ಲಿ ಈಗಾಗಲೇ ದಾಖಲಾಗಿರುವ “ತೋರಣಂ” ಎಂದು ಕರೆಯಲ್ಪಡುವ ಶಿಲಾ ವರ್ಣಚಿತ್ರವನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡಿದಾಗ ಸಂಶೋಧಕರ ತಂಡಕ್ಕೆ ಈ ಹೊಸ ಕಲಾಕೃತಿ ಪತ್ತೆಯಾಗಿದ್ದು, ಇದರಲ್ಲಿರುವ ರಚನೆಯನ್ನು ಕಂಡು ಬೆರಗಾಗಿದ್ದಾರೆ.

ಹೊಸದಾಗಿ ಪತ್ತೆಯಾದ ಕಲ್ಲಿನ ಮೇಲಿನ ಕೆತ್ತನೆಗಳಲ್ಲಿ ಗಾಳಿಪಟ ಮತ್ತು ಹಾವಿನ ಚಿತ್ರಣಗಳು ಕಾಣಸಿಗುತ್ತವೆ. ತೆರೆದ ಹುಲ್ಲುಗಾವಲು ಪ್ರದೇಶದಲ್ಲಿರುವ ಅದ್ಭುತವಾದ ಕೆಂಪು ಬಂಡೆಯ ಮೇಲೆ ತೀಕ್ಷ್ಣ ಉಪಕರಣದಿಂದ ಈ ವರ್ಣ ಚಿತ್ರವನ್ನು ಕೆತ್ತಲಾಗಿದ್ದು, 12,000 ಹಿಂದಿನ ಅದ್ಭುತ ನಾಗರಿಕತೆಯ ಮೇಲೆ ಬೆಳಕು ಚೆಲ್ಲಿದೆ.
ಈ ಸಂಶೋಧನಾ ತಂಡದಲ್ಲಿ ಕಾಞಂಗಾಡಿನ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ಐತಿಹಾಸಿಕ ಅಧ್ಯಾಪಕ ಡಾ. ನಂದಕುಮಾರ್ ಕೊರೊತ್, ಸಂಶೋಧಕ ಸತೀಶನ್ ಕಲಿಯಾನಂ, ಹಾಗೂ ಬರೋಡಾ ವಿಶ್ವವಿದ್ಯಾಲಯದ ಪುರಾತತ್ತ್ವ ವಿದ್ಯಾರ್ಥಿಗಳು ಅನಖಾ ಶಿವರಾಮನ್ ಮತ್ತು ಅಸ್ನಾ ಜಿಜಿ ಇದ್ದರು.

ಏನೇನಿದೆ?
ಗಾಳಿಪಟ ಮತ್ತು ಹಾವಿನ ಚಿತ್ರಗಳ ಪಕ್ಕದಲ್ಲೇ ಮಾನವ ಮುಖದ ಆಕಾರದ ರೇಖಾಚಿತ್ರವೂ ಇದರಲ್ಲಿ ಪತ್ತೆಯಾಗಿದೆ. ಸಂಶೋಧಕರ ಪ್ರಕಾರ, ಇದೇ ರೀತಿಯ ಕೆಂಪು ಕಲ್ಲಿನ ಕಲಾಕೃತಿಗಳು ಮಹಾರಾಷ್ಟ್ರದ ರತ್ನಗಿರಿಯಿಂದ ಕೇರಳದ ವಯನಾಡಿನವರೆಗೆ ಇತಿಹಾಸಪೂರ್ವ ಕಾಲದ ಮಾನವರು ರಚಿಸಿದ್ದು, ಕೆಲವು ಸುಮಾರು 12,000 ವರ್ಷಗಳಷ್ಟು ಹಳೆಯವು.
ಸಂಶೋಧಕರ ಅಂದಾಜಿನಂತೆ, ಎರಿಕುಲಂ ಪ್ರದೇಶದಲ್ಲಿ ವಾಸಿಸುತ್ತಿದ್ದ ಪ್ರಾಚೀನ ಮಾನವರು ತಮ್ಮ ಸುತ್ತಮುತ್ತಲಿನ ಪ್ರಕೃತಿದೃಶ್ಯಗಳಿಂದ ಪ್ರೇರಿತರಾಗಿ ಈ ಕಲೆಯನ್ನು ರಚಿಸಿರಬಹುದು. ಬಂಡೆಯ ಮೇಲಿನ ಚಿತ್ರದಲ್ಲಿ ಗಾಳಿಪಟವು ಮರದ ಕೊಂಬೆಯ ಮೇಲೆ ಇಳಿಯುವ ಕ್ಷಣವನ್ನು ಚಿತ್ರಿಸಿರುವುದು ಗಮನಾರ್ಹ. ಯಾವುದೋ ರಹಸ್ಯ ಸಂಕೇತಗಳು ಅಡಗಿರುವ ಸಾಧ್ಯತೆ ಇದೆ.
ಇದುವರೆಗೆ ಕಾಸರಗೋಡು ಜಿಲ್ಲೆಯಲ್ಲಿ 200 ಕ್ಕೂ ಹೆಚ್ಚು ಶಿಲಾ ರೇಖಾಚಿತ್ರಗಳು ಪತ್ತೆಯಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇವುಗಳ ಸಂರಕ್ಷಣೆಗಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.