‌ ಇಸ್ಲಾಮ್‌ನಲ್ಲಿ ಸರಳ ಮದುವೆಗೆ ಎಸ್‌ಐಎಸ್‌ ಕರೆ: ಜನಜಾಗೃತಿಗಾಗಿ ಶತದಿನ ಅಭಿಯಾನ

ಮಂಗಳೂರು: ಮದುವೆ ಎನ್ನುವುದು ಇಸ್ಲಾಂ ಧರ್ಮದಲ್ಲಿ ಶ್ರೇಷ್ಠ ಸತ್ಯರ್ಮ, ಅಪಾರ ಪುಣ್ಯ ಲಭಿಸುವ ಆರಾಧನೆ. ಆದರೆ ಇಂದು ಅದು ಹಲವು ಅನಾಚಾರಗಳ ಆಡುಂಬೊಲವಾಗಿ ಮಾರ್ಪಟ್ಟಿದೆ. ಮದುವೆಯ ಹೆಸರಿನಲ್ಲಿ ಹಲವಾರು ಅನಾಚಾರಗಳು ಸೇರಿಕೊಂಡು ಬಡವರಿಗೆ ಹೊರೆಯಾಗಿದೆ. ಇಂದು ಚಿನ್ನದ ಬೆಲೆ ದುಬಾರಿಯಾಗುತ್ತಿದ್ದು, ಈ ನಡುವೆ ಮಹ್‌ರ್‌ ಹೆಸರಲ್ಲಿ ಎಂಗೇಜೆಂಟ್, ಮೆಹಂದಿ, ಹಳದಿ, ಅರೇಬಿಯನ್ ನೈಟ್, ತಾಳ ಮತ್ತಿತರ ಅನಗತ್ಯ ಆಚರಣೆಗಳು ಬಡ ಯುವಕರನ್ನು ಆರ್ಥಿಕವಾಗಿ ಹಿಂಡಿ ಹಿಪ್ಪೆ ಮಾಡಿದೆ ಎಂದು ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಖ್ ಹೇಳಿದರು.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ವರದಕ್ಷಿಣೆ ಎಂಬ ಪೆಡಂಭೂತವು ಸುನ್ನೀ ಸಂಘಟನೆಗಳ ತೀವ್ರ ಹೋರಾಟದ ಫಲವಾಗಿ ಇಂದು ಮುಸ್ಲಿಂ ಸಮುದಾಯದಲ್ಲಿ ಬಹುತೇಕ ಅಂತ್ಯ ಕಂಡಿದೆ. ಇಸ್ಲಾಮಿನಲ್ಲಿ ಮದುವೆ ಬಹಳ ಸರಳವಾಗಿದ್ದು, ‘ಅತ್ಯಂತ ಬರಕತ್ತಿನ ಮದುವೆ ಎಂದರೆ ಕಡಿಮೆ ಖರ್ಚಿನದು’ ಎಂದು ಪ್ರವಾದಿಯವರೇ ಹೇಳಿದ್ದಾರೆ. ಹಾಗಿದ್ದೂ ಸಮುದಾಯದಲ್ಲಿ ಇಂದು ಮದುವೆಯು ಬಹಳ ದೊಡ್ಡ ಭಾರವಾಗಿ, ಬಡ ಯುವಕರು ಮದುವೆಯಾಗಲು ಹಿಂಜರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಇದನ್ನು ಪರಿವರ್ತಿಸುವುದು ಜವಾಬ್ದಾರಿಯುತ ಸಮಾಜ ಸೇವಕರ, ಸಂಘ ಸಂಸ್ಥೆಗಳ ಕರ್ತವ್ಯ ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ‘ಮಾದರಿ ಮದುವೆ ಶತದಿನ ಆಭಿಯಾನ” ಎಂಬ ಬಹುದೊಡ್ಡ ಸಮಾಜ ಸುಧಾರಣಾ ಚಳವಳಿಯನ್ನು ಹಮ್ಮಿಕೊಂಡಿದೆ. 2025 ನವೆಂಬರ್ 8ರಿಂದ 2026 ಫೆಬ್ರವರಿ 15ರ ತನಕ ನಡೆಯುವ ನೂರು ದಿನಗಳ ಈ ಅಭಿಯಾನವು, ಮದುವೆಗಳನ್ನು ಅನಾಚಾರ ಮುಕ್ತಗೊಳಿಸಲು ಮತ್ತು ಆರ್ಥಿಕ ಭಾರವನ್ನು ನಿಯಂತ್ರಿಸಲು ನಾಡಿನಾದ್ಯಂತ ವಿವಿಧ ಕಾರ್ಯ ಯೋಜನೆಗಳ ಮೂಲಕ ತೀವ್ರ ಪರಿಶ್ರಮ ನಡೆಸಲಿದೆ ಎಂದವರು ಹೇಳಿದರು.

‘ಮಾದರಿ ಮದುವೆ: ಶತದಿನ ಅಭಿಯಾನ’ವು ನವೆಂಬರ್ 8, ಶನಿವಾರ ಕೊಡಗು ಜಿಲ್ಲೆಯ ಎಮ್ಮೆಮಾಡುವಿನಲ್ಲಿ ಉದ್ಘಾಟನೆಗೊಳ್ಳಲಿದೆ. ರಾಜ್ಯಾಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆಯಲ್ಲಿ ಸುನ್ನೀ ಉಲಮಾ ಒಕ್ಕೂಟದ ಕೊಡಗು ಜಿಲ್ಲಾಧ್ಯಕ್ಷ ಸಯ್ಯದ್ ಶಿಹಾಬುದ್ದೀನ್ ತಂಬಳ್ ಕಿಲ್ಲೂರು ಉದ್ಘಾಟಿಸುವರು. ಅಧ್ಯಾತ್ಮ ಗುರು ಸಯ್ಯದ್ ವಿ.ಪಿ. ಅಬ್ದುರಹ್ಮಾನ್ ದಾರಿಮಿ ಆಟೀರಿ ತಂಬಳ್, ಕಲ್ಲಿಕೋಟೆ ಮರ್ಕಝ್ ಉಪನ್ಯಾಸಕ ಹಾಫಿಝ್ ಕೌಸರ್ ಸಖಾಫಿ ಭಾಷಣ ಮಾಡುವರು, ಕೂರ್ಗ್ ಜಂಇಯತುಲ್ ಉಲಮಾ ನಾಯಕರಾದ ಸಯ್ಯದ್ ಇಲ್ಯಾಸ್ ತಂಬಳ್, ಏರುಮಾಡ್‌ ದರ್ಗಾಧ್ಯಕ್ಷ ಹುಸೈನ್ ಸಖಾಫಿ, ಶಾಸಕರಾದ ಶ್ರೀ ಮಂಥರ್ ಗೌಡ, ಶ್ರೀ ಪೊನ್ನಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. 2026ರ ಫೆಬ್ರವರಿ 15ರಂದು ಅಭಿಯಾನವು ಸಮಾರೋಪಗೊಳ್ಳಲಿದ್ದು, ಈ ನಡುವಿನ ಅವಧಿಯಲ್ಲಿ ವಿವಿಧ ಸ್ತರಗಳಲ್ಲಿರುವ ಜನರಲ್ಲಿ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮನ್ಸೂರ್ ಅಲಿ ತೀರ್ಥಹಳ್ಳಿ (ಕೋಶಾಧಿಕಾರಿ), ಅಬ್ದುರಹ್ಮಾನ್ ರು ಉಡುಪಿ, (ಉಪಾಧ್ಯಕ್ಷರು), ಆಸಿಫ್ ಕೃಷ್ಣಾಪುರ (ಕಾರ್ಯದರ್ಶಿ), ಮಹೂಬ್ ಸಖಾಫಿ (ಜಿಲ್ಲಾಧ್ಯಕ್ಷರು), ಇಸ್ಮಾಈಲ್ ಮಾಸ್ಟರ್ (ಜಿಲ್ಲಾ ಪ್ರಧಾನ ಕಾರ್ಯದರ್ಶಿ) ಹಾಗೂ ಸಿದ್ದೀಕ್ ತೋಕೂರು (ನಗರ ಸಮಿತಿ ಕಾರ್ಯದರ್ಶಿ) ಉಪಸ್ಥಿತರಿದ್ದರು.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

error: Content is protected !!