ಬೆಳ್ತಂಗಡಿ: ಸ್ಕೂಟರ್‌ ಅಡ್ಡಗಟ್ಟಿ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ; ಆರೋಪಿಗಳು ಪರಾರಿ

ಬೆಳ್ತಂಗಡಿ: ಸ್ಕೂಟರ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಬಂದ ಮೂವರು ಅಪರಿಚಿತರು ಅಪಹರಿಸಲು ಯತ್ನಿಸಿದ ಘಟನೆ , ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿಯ ಸುದೇಮುಗೇರು ಎಂಬಲ್ಲಿ ಇಂದು(ಫೆ.9) ನಡೆದಿದೆ.

ಬೆಳ್ತಂಗಡಿ ನಗರದ ಸುದೇಮುಗೇರು ನಿವಾಸಿಯಾಗಿರುವ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಎಂದಿನಂತೆ ಇಂದು(ಫೆ.9) ಬೆಳಿಗ್ಗೆ 8:30ರ ಸುಮಾರಿಗೆ ತನ್ನ ಸ್ಕೂಟರ್‌ನಲ್ಲಿ ಸಂತೆಕಟ್ಟೆ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ, ನಂಬರ್ ಪ್ಲೇಟ್‌ಗೆ ಬಟ್ಟೆ ಕಟ್ಟಿದ ಕಾರಿನಲ್ಲಿ ಬಂದ ಮೂವರು ಅಪರಿಚಿತರು ಆಕೆಯ ಸ್ಕೂಟರ್‌ಗೆ ಅಡ್ಡಗಟ್ಟಿ ಕಾರಿನೊಳಗೆ ಎಳೆಯುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಬಾಲಕಿ ಬೊಬ್ಬೆ ಹೊಡೆದು ತೀವ್ರವಾಗಿ ವಿರೋಧ ವ್ಯಕ್ತಪಡಿಸಿ ತಪ್ಪಿಸಿಕೊಂಡಿದ್ದಾಳೆ. ಅಷ್ಟರಲ್ಲಿ ಅದೇ ರಸ್ತೆಯಲ್ಲಿ ಹಿಂಭಾಗದಿಂದ ಮತ್ತೊಂದು ಸ್ಕೂಟರ್ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಗಾಬರಿಗೊಂಡು ಚೂರಿಯಿಂದ ಬಾಲಕಿಯ ಕೈ ಹಾಗೂ ಬೆರಳಿಗೆ ಚುಚ್ಚಿ ಆಕೆಯ ಕಾಲೇಜು ಬ್ಯಾಗ್ ಕಿತ್ತುಕೊಂಡು ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಗಾಯಗೊಂಡ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದು ತನಿಖೆಯನ್ನು ನಡೆಸುತ್ತಿದ್ದಾರೆ.

 

error: Content is protected !!