ಮಂಗಳೂರು: ಕೊಟ್ಟಾರ ಚೌಕಿಯಲ್ಲಿ ನವೆಂಬರ್ 9ರಂದು ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ., ಇದರ ನವೀಕೃತ ‘ವಿಶ್ವಸೌಧ’ ಕಟ್ಟಡದ ಉದ್ಘಾಟನೆ ಮತ್ತು ವಜ್ರಮಹೋತ್ಸವದ ಸಮಾರೋಪ ಸಮಾರಂಭ ಜರಗಲಿದೆ ಎಂದು ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಮಾಹಿತಿ ನೀಡಿದರು.

ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ 60 ಸಂವತ್ಸರಗಳನ್ನು ಪೂರೈಸಿ ವಜ್ರಮಹೋತ್ಸವ ವರ್ಷಾಚರಣೆಯನ್ನು ಆಚರಿಸುತ್ತಿದೆ. ಆ ಪ್ರಯುಕ್ತ 60 ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕಾರ್ಯ-ಚಟುವಟಿಕೆಗಳನ್ನು ಆಯೋಜಿಸಿದ್ದು, ಈಗಾಗಲೇ 59 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. 60ನೇ ಕಾರ್ಯಕ್ರಮವನ್ನು ಸ್ವಾಮಿಜಿದ್ವಯವರ ದೀಪ ಪ್ರಜ್ವಲನೆ ಮತ್ತು ಆಶೀರ್ವಚನದೊಂದಿಗೆ, ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಇವರಿಂದ ನವೀಕೃತ “ವಿಶ್ವಸೌಧ” ಕಟ್ಟಡದ ಉದ್ಘಾಟನೆ ನಡೆಯಲಿದೆ. ಅಯೋಧ್ಯೆ ರಾಮಲಲ್ಲಾ ನಿರ್ಮಾತೃ ಶಿಲ್ಪಿ ಡಾ.ಅರುಣ್ ಯೋಗಿರಾಜ್, ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿಮ ದಕ್ಷಿಣ ಎಂ.ಎಲ್.ಎ. ವೇದವ್ಯಾಸ ಕಾಮತ್, ಸಂಸದ ಕ್ಯಾ| ಬ್ರಿಜೇಶ್ ಚೌಟ ಮತ್ತಿತರ ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿ ವಜ್ರ ಮಹೋತ್ಸವದ ಸಮಾರೋಪ ಸಮಾರಂಭವನ್ನು ಕೊಟ್ಟಾರಚೌಕಿಯಲ್ಲಿರುವ ಆಡಳಿತ ಕಛೇರಿಯ ಬಳಿ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯ ವೇದಿಕೆಯಲ್ಲಿ ಆಯೋಜಿಸಲಾಗಿದೆ ಎಂದು ಉಪೇಂದ್ರ ಆಚಾರ್ಯ ವಿವರಿಸಿದರು.
ಪ್ರಧಾನ ವ್ಯವಸ್ಥಾಪಕರಾದ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಅತಿಥಿಗಳನ್ನು ಪರಿಚಯಿಸಿ, ಸಂಸ್ಥೆಯ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎ. ಆನಂದ ಆಚಾರ್ಯ, ನಿರ್ದೇಶಕ ಕೆ. ಯಕ್ಞೇಶ್ವರ ಆಚಾರ್ಯ, ವಿ. ಜಯ ಆಚಾರ್ಯ, ಕೆ. ಶಶಿಕಾಂತ್ ಆಚಾರ್ಯ ಹಾಗೂ ಕೆ. ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.
——————

ಎಸ್.ಕೆ. ಗೋಲ್ಡ್‌ಸ್ಮಿತ್‌ನ 60 ವರ್ಷದ ಯಶಸ್ವೀ ಸುವರ್ಣಯಾನ
1963ರಲ್ಲಿ ಕೇಂದ್ರ ಸರ್ಕಾರವು ಜಾರಿಗೊಳಿಸಿದ ಸ್ವರ್ಣ ನಿಯಂತ್ರಣ ಕಾಯ್ದೆಯಿಂದಾಗಿ ಸಾವಿರಾರು ಚಿನ್ನದ ಕೆಲಸಗಾರರು ತಮ್ಮ ಪರಂಪರೆಯ ವೃತ್ತಿಯನ್ನು ಕಳೆದುಕೊಂಡರು. ಅವರಿಗೆ ಪರ್ಯಾಯ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಲ್ಲಿ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಲು ನೆರವು ನೀಡಿತು. ಅದರ ಭಾಗವಾಗಿ ಕರ್ನಾಟಕದಲ್ಲೂ ಚಿನ್ನದ ಕೆಲಸಗಾರರಿಗಾಗಿ ಕೈಗಾರಿಕಾ ಸಹಕಾರ ಸಂಘಗಳು ಸ್ಥಾಪಿಸಲ್ಪಟ್ಟವು.
ಅದೇ ಹಿನ್ನೆಲೆಯಲ್ಲೇ, ಮಂಗಳೂರಿನ ಕೈಗಾರಿಕಾ ಸಹಾಯಕ ನಿರ್ದೇಶಕರ ಪ್ರೋತ್ಸಾಹದಿಂದ ಎಸ್.ಕೆ. ಗೋಲ್ಡ್‌ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಎಂಬ ಹೆಸರಿನಲ್ಲಿ ಸಂಸ್ಥೆ 1964ರ ಜನವರಿ 9ರಂದು ನೋಂದಾಯಿಸಲ್ಪಟ್ಟಿತು. ಸಂಸ್ಥೆಯ ಪ್ರಥಮ ಅಧ್ಯಕ್ಷರಾಗಿದ್ದವರು ಪ್ರಸಿದ್ಧ ಜ್ಯುವೆಲ್ಲರ್ಸ್ ಮಾಲಕರಾದ ಪಾಜ್ಞೆ ಬಾಬುರಾಯ ಆಚಾರ್ಯ, ಗೌರವ ಕಾರ್ಯದರ್ಶಿಯಾಗಿ ಎಂ. ಕೃಷ್ಣಗೋಪಾಲ, ಕೋಶಾಧ್ಯಕ್ಷರಾಗಿ ಬಿ. ದಾಮೋದರ ಆಚಾರ್ಯ ಹಾಗೂ ಇತರ ವಿಶ್ವಕರ್ಮ ಸಮುದಾಯದ ಗಣ್ಯರು ಸದಸ್ಯರಾಗಿ ಸೇವೆ ಸಲ್ಲಿಸಿದರು.

ಆರಂಭ ಮತ್ತು ವಿಕಾಸ
ಆರಂಭದಲ್ಲಿ ಸಂಸ್ಥೆಯು ಜೆಪ್ಪು ಶಾಂತಿನಗರದಲ್ಲಿನ ಕಟ್ಟಡದಲ್ಲಿ ಮರ ಮತ್ತು ಕಬ್ಬಿಣದ ಪೀಠೋಪಕರಣ ತಯಾರಿಕಾ ಘಟಕವನ್ನು ಪ್ರಾರಂಭಿಸಿತು. ಕಚ್ಚಾ ಮಾಲು, ವಿದ್ಯುತ್ ಮತ್ತು ಕಾರ್ಮಿಕರ ಕೊರತೆಯಿಂದಾಗಿ ಪ್ರಾರಂಭದ ದಿನಗಳಲ್ಲಿ ಸವಾಲುಗಳನ್ನು ಎದುರಿಸಿದರೂ, ಬಾಬುರಾಯ ಆಚಾರ್ಯರು ತಮ್ಮ ವೈಯಕ್ತಿಕ ಸಂಪನ್ಮೂಲಗಳಿಂದ ಸಂಸ್ಥೆಗೆ ಆರ್ಥಿಕ ಸಹಾಯ ನೀಡಿದರು. 1976ರಲ್ಲಿ ಆಗಿನ ಕಿರು ಕೈಗಾರಿಕಾ ಸಚಿವ ಎಂ. ವೀರಪ್ಪ ಮೊಯ್ಲಿ ಅವರಿಂದ ರಥಬೀದಿಯಲ್ಲಿನ ಸಣ್ಣ ಕೊಠಡಿಯಲ್ಲಿ ಬ್ಯಾಂಕಿಂಗ್ ವಿಭಾಗ ಆರಂಭಗೊಂಡಿತು. 167 ಸದಸ್ಯರಿಂದ ಪ್ರಾರಂಭವಾದ ಬ್ಯಾಂಕಿಂಗ್ ಘಟಕ ಇಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 18 ಶಾಖೆಗಳೊಂದಿಗೆ ಯಶಸ್ವಿಯಾಗಿ ಬೆಳೆಯುತ್ತಿದೆ.
ಪ್ರಮುಖ ಉದ್ದೇಶಗಳು
ಸಂಸ್ಥೆಯ ಉದ್ದೇಶ ಸದಸ್ಯರ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ. ಇದರಡಿ— ಮರ, ಲೋಹ ಮತ್ತು ಇತರ ಕೈಗಾರಿಕಾ ವಸ್ತುಗಳ ತಯಾರಿ ಮತ್ತು ಮಾರಾಟ, ಸದಸ್ಯರಿಂದ ಠೇವಣಿ ಸಂಗ್ರಹಣೆ ಮತ್ತು ಶೇರು ಬಂಡವಾಳ ವೃದ್ಧಿ, ತಾಂತ್ರಿಕ ತರಬೇತಿ ಮತ್ತು ಉದ್ಯೋಗಾವಕಾಶ ಒದಗಿಸುವುದು, ಗೃಹ, ವಾಹನ, ಯಂತ್ರೋಪಕರಣ, ಚಿನ್ನಾಭರಣ, ಶಿಕ್ಷಣ ಸಾಲಗಳು, ಶೂನ್ಯ ಬಡ್ಡಿದರದ ಸೋಲಾರ್ ಉಪಕರಣ ಸಾಲ ಯೋಜನೆ, ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ಯೋಜನೆ ಇತ್ಯಾದಿ.

ಆಡಳಿತ ಮತ್ತು ಬೆಳವಣಿಗೆ
ಸಂಸ್ಥೆಯ ಪ್ರಗತಿಗೆ ದೇವಮಾನವ ಬಾಬುರಾಯ ಆಚಾರ್ಯರು, ಎಂ. ಗೋಪಾಲ ಆಚಾರ್ಯರು, ಕೆ. ಶಿವರಾಮ ಆಚಾರ್ಯರು, ಜಿ.ಡಿ. ಆಚಾರ್ಯರು, ಅಲೆವೂರು ಮಾದವ ಆಚಾರ್ಯರು, ಬಿ.ಎಂ. ರವೀಂದ್ರ ಆಚಾರ್ಯರು ಹಾಗೂ ಬೈಕಾಡಿ ಜನಾರ್ದನ ಆಚಾರ್ಯರು ಪ್ರಮುಖ ಪಾತ್ರ ವಹಿಸಿದ್ದಾರೆ. 1993ರಿಂದ 2018ರವರೆಗೆ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ ಕೆ. ಉಮೇಶ್ ಆಚಾರ್ಯ ಅವರ ಅವಧಿಯಲ್ಲಿ ಸಂಸ್ಥೆ ಗಣನೀಯ ಪ್ರಗತಿಯನ್ನು ಸಾಧಿಸಿತು. ಪ್ರಸ್ತುತ ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷರಾಗಿದ್ದು, ಯಕ್ಷೇಶ್ವರ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಧನೆಗಳು
40 ವರ್ಷಗಳಿಂದ ನಿರಂತರ ಲಾಭದಾಯಕ ಸಂಸ್ಥೆ
33 ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ ‘ಎ’ ವರ್ಗದ ಮಾನ್ಯತೆ
34 ವರ್ಷಗಳಿಂದ ಸದಸ್ಯರಿಗೆ 18% ಡಿವಿಡೆಂಡ್; 2024–25ರಲ್ಲಿ ವಜ್ರಮಹೋತ್ಸವ ಪ್ರಯುಕ್ತ 20%
ಠೇವಣಿಗಳಿಗೆ ಆಕರ್ಷಕ ಬಡ್ಡಿದರ (ಸಾಮಾನ್ಯರಿಗೆ 9.2%, ಹಿರಿಯರಿಗೆ 9.3%)
ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ – ಇದುವರೆಗೆ 2,735 ವಿದ್ಯಾರ್ಥಿಗಳಿಗೆ ₹68 ಲಕ್ಷ ವಿತರಣೆ
2024–25ರಲ್ಲಿ ಮಾತ್ರವೇ 363 ವಿದ್ಯಾರ್ಥಿಗಳಿಗೆ ₹11.70 ಲಕ್ಷ ವಿದ್ಯಾರ್ಥಿವೇತನ ನೀಡಲಾಗಿದೆ.
ಶಾಖೆಗಳು ಮತ್ತು ಮೂಲಸೌಕರ್ಯ
ಸಂಸ್ಥೆಯ ಆಡಳಿತ ಕಚೇರಿ ಕೊಟ್ಟಾರಚೌಕಿಯ ‘ವಿಶ್ವಸೌಧ’ದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉಡುಪಿ, ಕುಂದಾಪುರ, ಕಿನ್ನಿಗೋಳಿ, ಪಡುಬಿದ್ರಿ, ಕುಳಾಯಿ, ಮಂಚಕಲ್, ಮೂಡುಬಿದಿರೆ, ಪುತ್ತೂರು ಸೇರಿದಂತೆ ಒಟ್ಟು 18 ಶಾಖೆಗಳು ಸೇವೆ ಸಲ್ಲಿಸುತ್ತಿವೆ. ಬೈಕಂಪಾಡಿಯಲ್ಲಿ ಉದ್ದಿಮೆ ಘಟಕವಿದ್ದು, ಕಬ್ಬಿಣ ಮತ್ತು ಮರದ ಪೀಠೋಪಕರಣ ತಯಾರಿಸುತ್ತಿದೆ.
ಪ್ರಶಸ್ತಿಗಳು ಮತ್ತು ಗೌರವಗಳು
2007 – ರಾಜ್ಯದ ಉತ್ತಮ ಸಹಕಾರ ಸಂಘ ಪ್ರಶಸ್ತಿ
2008 – ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ
2015, 2016 – ಜಿಲ್ಲಾ ಮಟ್ಟದ ಉತ್ತಮ ಸಂಸ್ಥೆ ಪ್ರಶಸ್ತಿ
2017 – “ಕರ್ನಾಟಕ ಸಂಘ ರತ್ನ ಗೌರವ”
ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಸಾಧನಾ ಪ್ರಶಸ್ತಿ ಸತತ 8 ಬಾರಿ
2023 – ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ
2024 – 71ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ “ಉತ್ತಮ ಸಹಕಾರ ಸಂಘ” ಪ್ರಶಸ್ತಿ
ಸಮಾಜಮುಖಿ ಚಟುವಟಿಕೆಗಳು
ವಜ್ರಮಹೋತ್ಸವದ ಅಂಗವಾಗಿ ಸಂಸ್ಥೆ 60 ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಶಾಲೆಗಳಿಗೆ ಪುಸ್ತಕ ವಿತರಣೆ, ಬೆಂಚು–ಡೆಸ್ಕುಗಳ ಹಸ್ತಾಂತರ, ಉಚಿತ ಹೃದಯ ಹಾಗೂ ನೇತ್ರ ತಪಾಸಣೆ ಶಿಬಿರ, ರಕ್ತದಾನ, ವನಮಹೋತ್ಸವ, ವೃದ್ಧಾಶ್ರಮ ನೆರವು, ನಿರಾಶ್ರಿತರಿಗೆ ಆಹಾರ ವಿತರಣೆ, ಆರೋಗ್ಯ ಸೇವೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೇಣಿಗೆ ಮುಂತಾದ ಕಾರ್ಯಗಳನ್ನು ಕೈಗೊಂಡಿದೆ. ಹಾಗೇ ದ.ಕ. ಜಿಲ್ಲೆ ಕಿನ್ನಿಗೋಳಿ ಹಾಗೂ ಉಡುಪಿ ಜಿಲ್ಲೆಯ ಸೈಬರಕಟ್ಟೆಯಲ್ಲಿ ಬಡ ಕುಟುಂಬಗಳಿಗೆ ತಲಾ ₹7.5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿ ಹಸ್ತಾಂತರಿಸಿದೆ.
ಗೌರವ ಮತ್ತು ಜನಪ್ರಿಯತೆ
ಸದಸ್ಯರಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ನೆರವು ನೀಡುವುದರ ಮೂಲಕ ಜನಮನ ಗೆದ್ದಿರುವ ಸಂಸ್ಥೆ ಇಂದು “ಗೋಲ್ಡ್ ಬ್ಯಾಂಕ್” ಎಂಬ ಹೆಸರಿನಲ್ಲಿ ಖ್ಯಾತಿ ಪಡೆದಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಮಾದರಿ ಸಹಕಾರ ಸಂಘವಾಗಿ ಬೆಳೆವ ಆಶಯದೊಂದಿಗೆ ಸಂಸ್ಥೆ ಮುಂದುವರಿಯುತ್ತಿದೆ.