ಕುಂದಾಪುರ: ಕುಂದಾಪುರ ಸಮೀಪದ ತಲ್ಲೂರಿನಲ್ಲಿ ಮಂಗಳವಾರ(ನ.4) ಸಂಜೆ ದುಷ್ಕರ್ಮಿಗಳು ನಿಲ್ಲಿಸಿದ್ದ ಕಾರಿನ ಕಿಟಕಿ ಒಡೆದು 2 ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಕೆಂಚನೂರಿನ ನಿವಾಸಿ ಹಾಗೂ ಗುತ್ತಿಗೆದಾರ ಗುಂಡು ಶೆಟ್ಟಿ ಎಂಬವರು ತಲ್ಲೂರಿನ ಬ್ಯಾಂಕಿನಿಂದ 2 ಲಕ್ಷ ರೂ. ಡ್ರಾ ಮಾಡಿ ತನ್ನ ಕಾರಿನೊಳಗೆ ಹಣವನ್ನು ಇಟ್ಟುಕೊಂಡಿದ್ದರು. ನಂತರ ತಲ್ಲೂರು ಪಟ್ಟಣದ ಬಳಿಯ ವಸತಿ ಸಂಕೀರ್ಣದ ಮುಂದೆ ವಾಹನವನ್ನು ನಿಲ್ಲಿಸಿ ತನ್ನ ಬಾಡಿಗೆ ಮನೆಗೆ ಹೋದರು. ಸುಮಾರು 10-15 ನಿಮಿಷಗಳ ನಂತರ ಹಿಂತಿರುಗಿದಾಗ, ಕಾರಿನ ಕಿಟಕಿ ಒಡೆದು ನಗದು ಕಾಣೆಯಾಗಿರುವುದು ಕಂಡುಬಂದಿದೆ.

ತಲ್ಲೂರು ಜಂಕ್ಷನ್ ಬಳಿಯ ಜನನಿಬಿಡ ಪ್ರದೇಶದಲ್ಲಿ ಕಳ್ಳತನ ಸಂಭವಿಸಿದ್ದು, ದುಷ್ಕರ್ಮಿಗಳು ಕಾರಿನ ಬಲಭಾಗದ ಕಿಟಕಿ ಒಡೆದು ಡ್ಯಾಶ್‌ಬೋರ್ಡ್‌ನಲ್ಲಿದ್ದ ಹಣವನ್ನು ಕದ್ದಿದ್ದಾರೆ. ದುಷ್ಕರ್ಮಿಗಳು ಗುಂಡು ಶೆಟ್ಟಿಅವರು ಬ್ಯಾಂಕ್‌ನಿಂದ ನಗದು ಡ್ರಾ ಮಾಡಿರುವುದನ್ನು ತಿಳಿದು ಹಿಂಬಾಲಿಸಿ ಕಳ್ಳತನ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಕುಂದಾಪುರ ಎಸ್‌ಐ ನಂಜಾ ನಾಯಕ್ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.