ಬೆಂಗಳೂರು: ಸರ್ಕಾರದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ನ್ಯೂಸ್ ಫ್ಯಾಕ್ಟರಿ 09 ಎಂಬ ಯುಟ್ಯೂಬ್ ಚಾನಲ್ ವಿರುದ್ಧ ಸೈಬರ್‌ಕ್ರೈಂ ಠಾಣೆಯ ಎಎಸ್‌ಐ ಅಸ್ಮಾಬೇಗಂ ಎಂಬುವರು ನೀಡಿದ ದೂರಿನ ಮೇರೆಗೆ ನಗರ ಸೈಬರ್ ಕ್ರೈಂ ಠಾಣೆ ಪೊಲೀಸರು ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಮಾಡುತ್ತಿರುವ ಸಹಾಯಕ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅಸ್ಮಾಂ ಬೇಗಂ ನೀಡಿದ ದೂರಿನನ್ವಯ ನ್ಯೂಸ್ ಫ್ಯಾಕ್ಟರಿ-09 ಯುಟ್ಯೂಬ್ ಚಾನಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಿಡಿಗೇಡಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಭಾವಚಿತ್ರ ಬಳಸಿ ಮೂರು ಕೋಳಿ ಮೊಟ್ಟೆಗಳನ್ನು ಬಾಯಿಯಿಂದ ತಿನ್ನುತ್ತಿರುವಂತೆ ಅವಹೇಳನಕಾರಿ ಯಾಗಿ ಭಾವಚಿತ್ರ ಸೃಷ್ಟಿಸಿ, ಅದನ್ನು 5 ಸೆಕೆಂಡಿನ ರೀಲ್ಸ್ ಮಾಡಿ ಯುಟ್ಯೂಬ್ ಚಾನಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

568 ಶಾಲೆಗಳಲ್ಲಿ ಕೇವಲ 3 ದಿನ ಮೊಟ್ಟೆ, ಅಜೀಂ ಪ್ರೇಮ್ ಜೀ ವರದಿಯಿಂದ ಬಹಿರಂಗ. ದಾನಿಗಳಿಂದ ಶಾಲೆ ಮಕ್ಕಳಿಗೆ 6 ಮೊಟ್ಟೆ ಮಕ್ಕಳಿಗೆ ಸಿಗುತ್ತಿರುವುದು 3 ಮೊಟ್ಟೆ, 6-3=3 ಮೊಟ್ಟೆ ಇನ್ನುಳಿದ 3 ಮೊಟ್ಟೆ ಯಾರ ಬಾಯಿಗೆ? ಎಂದು ಬರೆದು ಫೋಟೋ ಎಡಿಟ್ ಮಾಡಿ ರೀಲ್ಸ್ ಮಾಡಿ ಹರಿಬಿಟ್ಟಿರುವ ಆರೋಪ ಕೇಳಿ ಬಂದಿದೆ.