ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವವನ್ನು ನವೆಂಬರ್ 7 ಮತ್ತು 8ರಂದು ಕ್ರಮವಾಗಿ ಮಂಗಳೂರು ಹಾಗೂ ನಿಟ್ಟೆ ಕ್ಯಾಂಪಸ್‌ಗಳಲ್ಲಿ ವೈಭವದಿಂದ ಆಚರಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಉಪಕುಲಪತಿ ಪ್ರೊ. ಡಾ. ಎಂ.ಎಸ್. ಮೂಡಿತ್ತಾಯ ಮಾಹಿತಿ ನೀಡಿದ್ದಾರೆ.

ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಬರ್ 7ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರಿನ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿ ಮೈದಾನದಲ್ಲಿ ಹಾಗೂ ನವೆಂಬರ್ 8ರಂದು ಬೆಳಿಗ್ಗೆ 10.30ಕ್ಕೆ ಕಾರ್ಕಳದ ನಿಟ್ಟೆ ಕ್ಯಾಂಪಸ್‌ನಲ್ಲಿ ಘಟಿಕೋತ್ಸವ ನಡೆಯಲಿದೆ. ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ಪ್ರೊ. ಡಾ. ಕೆ. ಶ್ರೀನಾಥ್ ರೆಡ್ಡಿ (ಭಾರತೀಯ ಸಮುದಾಯ ಆರೋಗ್ಯ ಪ್ರತಿಷ್ಠಾನ – ಪಿಎಚ್‌ಎಫ್‌ಐ) ಮಂಗಳೂರು ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ನಿಟ್ಟೆ ಕ್ಯಾಂಪಸ್‌ನಲ್ಲಿ ಪ್ರೊ. ಡಾ. ಸಿದ್ದು ಪಿ. ಅಲ್ಲೂರ್ (ಕೇಂದ್ರೀಯ ವಿಶ್ವವಿದ್ಯಾನಿಲಯ, ಕೇರಳ – ಕುಲಪತಿ) ಮುಖ್ಯ ಅತಿಥಿಯಾಗಿದ್ದಾರೆ ಎಂದರು.
ಈ ವರ್ಷ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದ ದಿವಂಗತ ಡಾ. ಮಧುಕರ ಶಾಂತಾರಾಮ ಕೇಕ್ರೆ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಈ ಘಟಿಕೋತ್ಸವದಲ್ಲಿ ಒಟ್ಟು 1,999 ವಿದ್ಯಾರ್ಥಿಗಳು ಪದವಿಗಳನ್ನು ಸ್ವೀಕರಿಸಲಿದ್ದಾರೆ.
ಅದರ ಪೈಕಿ 31 ಡಾಕ್ಟರೇಟ್ ಪದವಿಗಳು, 907 ಸ್ನಾತಕೋತ್ತರ ಪದವಿಗಳು, 1,054 ಸ್ನಾತಕ ಪದವಿಗಳು, 5 ಫೆಲೋಶಿಪ್‌ಗಳು ಮತ್ತು 2 ಸ್ನಾತಕೋತ್ತರ ಡಿಪ್ಲೊಮಾಗಳು ಪ್ರದಾನಗೊಳ್ಳಲಿವೆ. ಪದವೀಧರರಲ್ಲಿ ಆರೋಗ್ಯ ವಿಜ್ಞಾನ, ಎಂಜಿನಿಯರಿಂಗ್, ವ್ಯವಹಾರ ನಿರ್ವಹಣೆ, ವಾಸ್ತುಶಿಲ್ಪ, ನರ್ಸಿಂಗ್, ಆತಿಥ್ಯ ನಿರ್ವಹಣೆ, ಮಾನವಶಾಸ್ತ್ರ ಮತ್ತು ಜೀವವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ಮೂಡಿತ್ತಾಯ ಮಾಹಿತಿ ನೀಡಿದರು.

ನಿಟ್ಟೆ ವಿಶ್ವವಿದ್ಯಾನಿಲಯವು 2008ರಲ್ಲಿ ಸ್ಥಾಪನೆಯಾಗಿ, ಇಂದು ರಾಷ್ಟ್ರ ಮಟ್ಟದಲ್ಲಿ NAAC ‘A’ ಶ್ರೇಣಿ ಪಡೆದಿದೆ. NIRF ರ್ಯಾಂಕಿಂಗ್ ಪ್ರಕಾರ 80ನೇ ಸ್ಥಾನ ಹಾಗೂ ಟೈಮ್ಸ್ ಹೈಯರ್ ಎಜುಕೇಷನ್ ರ್ಯಾಂಕಿಂಗ್ ಪ್ರಕಾರ ವಿಶ್ವದ 300 ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಸ್ಥಾನ ಪಡೆದಿದೆ. ವಿಶ್ವವಿದ್ಯಾನಿಲಯವು 160ಕ್ಕೂ ಅಧಿಕ ಶೈಕ್ಷಣಿಕ ಕೋರ್ಸ್‌ಗಳು ನಡೆಸುತ್ತಿದ್ದು, 22 ಗ್ರಾಮೀಣ ಆರೋಗ್ಯ ಕೇಂದ್ರಗಳ ಮೂಲಕ ಪ್ರತಿವರ್ಷ 2 ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ ಎಂದು ಅವರು. ತಿಳಿಸಿದರು.

ಕುಲಾಧಿಪತಿ ಎನ್. ವಿನಯ ಹೆಗ್ಡೆ, ಉಪಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ, ನಿರ್ವಹಣಾ ಮಂಡಳಿಯ ಸದಸ್ಯ ವಿಶಾಲ್ ಹೆಗ್ಡೆ, ಡಾ. ಪ್ರಸಾದ್ ಶೆಟ್ಟಿ, ವಿಭಾಗ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹರ್ಷ ಹಾಲಹಳ್ಳಿ, ಪ್ರಸಾದ್ ಶೆಟ್ಟಿ, ವಿನೋದ್ ಅರನ್ಹ, ನೇಸರ್ ಕದನಕುಪ್ಪೆ, ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.