ಮಂಗಳೂರು: ಎರಡು ದಿನಗಳ ಬಿಡುವು ಪಡೆದಿದ್ದ ವರುಣ ನ.4ರ ಬಳಿಕ ಮತ್ತೆ ತನ್ನ ಡ್ಯೂಟಿ ಆರಂಭಿಸಲಿರುವುದರಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಗದ್ದೆಯಲ್ಲಿ ಭತ್ತದ ಕೃಷಿಕರು ನಾಳೆಯೊಳಗಡೆ ಕಟಾವು ಮಾಡಿ ತೆನೆಯನ್ನು ಮನೆ ತುಂಬಿಸುವುದೊಳಿತು. ಇಲ್ಲವಾದರೆ ನ.7ರ ಬಳಿಕ ಗದ್ದೆ ಕೆಲಸ ಮಾಡಬಹುದು.

ಹವಾಮಾನ ಇಲಾಖೆಯ ವರದಿಯ ಪ್ರಕಾರ ಬಂಗಾಲ ಕೊಲ್ಲಿಯಲ್ಲಿ ನಿಮ್ನ ಒತ್ತಡದ ಲಕ್ಷಣ ಕಾಣಿಸಿರುವುದರಿಂದ ನ. 4ರ ಬಳಿಕ ಕರಾವಳಿಯ ಕೆಲವೆಡೆ ಒಂದೆರಡು ದಿನ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ನ. 5 ರಿಂದ 7ರ ವರೆಗೆ ಭಾರತೀಯ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಣೆ ಮಾಡಿದ್ದು ಭಾರೀ ಮಳೆಯಾಗುವ ಸಾಧ್ಯತೆ ಇದೆ.
ತುಳುನಾಡಿನಲ್ಲಿ ಭಾನುವಾರದಿಂದ ಮಳೆ ಕ್ಷೀಣಿಸಿದ್ದು, ಆಗಾಗ ಬಿಸಿಲು ಆಗಾಗ ಮೋಡದ ಆಟ ತೋರಿಸಿ ವರುಣ ದೇವ ಕಣ್ಣಾಮುಚ್ಚಾಲೆ ಆಡಿ ಭೂಮಿಯನ್ನು ಅಣಕಿಸುತ್ತಿದ್ದ. ಜೊತೆಗೆ ವಿಪರೀತ ಸೆಖೆಯಿಂಧ ಎಸಿ, ಫ್ಯಾನ್‌ಗಳು ಬ್ಯುಸಿಯಾಗಿದ್ದವು. ಉಡುಪಿ ಕಡೆ ಕೆಲವೆಡೆ ತುಂತುರು ಹನಿ ಬೀಳಿಸಿ ತಂಪು ಮಾಡಿದ್ದ. ಆದರೆ ನಾಳೆಯ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿದೆ.
