ಬೆಂಗಳೂರು: ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 14 ವರ್ಷದೊಳಗಿನ ಮಕ್ಕಳ ಮಿನಿ ಕರ್ನಾಟಕ ಕ್ರೀಡಾಕೂಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ನಮ್ಮ ಸರ್ಕಾರ ಕ್ರೀಡೆಗೆ ನಿರಂತರವಾಗಿ ಪ್ರೋತ್ಸಾಹ ಕೊಟ್ಟುಕೊಂಡೇ ಬರುತ್ತಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ಇಂಥಾ ಕ್ರೀಡಾಕೂಟ ಸಹಕಾರಿ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಉತ್ಸಾಹದಿಂದ ಭಾಗವಹಿಸಿ. ಕ್ರೀಡೆಯಲ್ಲಿ ಗೆಲುವು ಸೋಲಿಗಿಂತ ಭಾಗವಹಿಸುವಿಕೆ ಅತೀ ಮುಖ್ಯ ಎಂದು ಹೇಳಿದರು.
ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ನಮ್ಮ ಸರ್ಕಾರ ನಿರ್ಧರಿಸಿದೆ. ಪೊಲೀಸ್ ಇಲಾಖೆಯಲ್ಲಿ ಶೇ.3 ರಷ್ಟು ಹುದ್ದೆಗಳು ಮತ್ತು ಇತರೆ ಇಲಾಖೆಗಳಲ್ಲಿ ಶೇ.2 ರಷ್ಟು ಹುದ್ದೆಗಳನ್ನು ನೀಡಲಾಗುತ್ತದೆ. ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ವಿಜೇತರಾಗಿ ಪದಕ ತಂದ ಕ್ರೀಡಾ ಪಟುಗಳಿಗೆ ಉತ್ತಮ ನಗದು ಬಹುಮಾನವನ್ನೂ ನೀಡುತ್ತಿದ್ದೇವೆ. ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಪ್ರಶಸ್ತಿ ತರುವವರಿಗೆ ರಾಜ್ಯ ಸರ್ಕಾರವು ಚಿನ್ನಕ್ಕೆ 7 ಲಕ್ಷ, ಬೆಳ್ಳಿಗೆ 5 ಲಕ್ಷ ಮತ್ತು ಕಂಚಿನ ಪದಕ ವಿಜೇತರಿಗೆ 2 ಲಕ್ಷ ರೂ.ಗಳನ್ನು ನೀಡುತ್ತೇವೆ. ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ದೇಶದಲ್ಲಿಯೇ ಮುಂಚೂಣಿಯಲ್ಲಿ ಇರಬೇಕು ಎನ್ನುವುದು ನಮ್ಮ ಬಯಕೆ. ಇದಕ್ಕೆ ಬೇಕಾದ ಎಲ್ಲ ನೆರವನ್ನು ನಾವು ನೀಡಲಿದ್ದೇವೆಂದು ತಿಳಿಸಿದರು.