
ಸುರತ್ಕಲ್: ಮುಲ್ಕಿ ತಾಲೂಕಿನ ಒಂಬತ್ತು ಮಾಗಣೆಯ ಇತಿಹಾಸ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ಸ್ಥಾಪಿಸಿದ ಸುಮಾರು 800 ವರ್ಷಗಳ ಇತಿಹಾಸವಿರುವ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗುತ್ತಿದ್ದು 2026ರ ಫೆಬ್ರವರಿ 5ರಿಂದ 9ರವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಸನ್ಮಾನ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಜರುಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಬಿ.ಕರ್ಕೇರ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಸುಮಾರು 3 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳು ಸಿದ್ಧಗೊಂಡಿದ್ದು ಕಾಂತಾಬಾರೆ ಬೂದಾಬಾರೆಯವರಿಗೆ ಪ್ರತ್ಯೇಕ ಗರೋಡಿ ಮಾತ್ರವಲ್ಲದೆ ಶ್ರೀ ಉಳ್ಳಾಯ, ಇಷ್ಟದೇವತಾ, ಕೊಡಮಣಿತ್ತಾಯ, ಧೂಮಾವತಿ, ಬಂಟ, ಜಾರಂದಾಯ, ಬಂಟ, ಓಡ್ಯಂತಾಯ, ಮೂಲ ಮೈಸಂದಾಯ ಸೇರಿದಂತೆ ಪರಿವಾರ ಶಕ್ತಿಗಳಿಗೆ ಸಂಪೂರ್ಣ ಶಿಲಾಮಯ ದೈವಸ್ಥಾನ ನಿರ್ಮಾಣವಾಗುತ್ತಿದೆ ಎಂದು ಅವರು ತಿಳಿಸಿದರು.

ಸಸಿಹಿತ್ಲು ಗರೋಡಿಗೆ ಅತ್ಯಂತ ಪ್ರಾಚೀನ ಇತಿಹಾಸವಿದ್ದು ಇಲ್ಲಿನ ಗಡಿಪ್ರಧಾನರು ಕಾಂತುಲಕ್ಕಣ ಯಾನೆ ಪಟೇಲ್ ಮನೆತನದವರಿಗೆ ಸಿಗುವ ಆ ಗಡಿ ಪಟ್ಟಕ್ಕೆ ವಿಶೇಷ ಗೌರವ ಇದ್ದು ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರ್ ಕಚೇರಿಯಿಂದ ಸರಕಾರಿ ಮುದ್ರೆಯ ಉಂಗುರ ಧರಿಸಿ ಈ ಪಟ್ಟಾಭಿಷೇಕ ನಡೆಯುವುದು ಹಿಂದಿನಿಂದಲೂ ನಡೆದು ಬಂದ ವಾಡಿಕೆಯಾಗಿದೆ. ಕಾಂತಾಬಾರೆ ಬೂದಾಬಾರೆಯರು ಅಂದು ಗರೋಡಿ ಕಟ್ಟುವ ಸಂದರ್ಭದಲ್ಲಿ ಪಡುಪಣಂಬೂರು ಮುಟ್ಟಿಕಲ್ಲಿನಿಂದ ಹಾಸುಕಲ್ಲುಗಳನ್ನು ಹೆಗಲಲ್ಲಿ ತರುವಾಗ ಹೊಯಿಗೆಗುಡ್ಡೆಯ ಗೌರಿ ದೇವಿ ಕೋಳಿಯಾಗಿ ಕೂಗಿದರಂತೆ. ರಾತ್ರಿ ಬೆಳಗಾಗುವದರೊಳಗೆ ಗರೋಡಿ ಕಟ್ಟುವೆವೆಂದು ಭಾಷೆ ಕೊಟ್ಟು ಬಂದ ಕಾಂತಾಬಾರೆ ಬೂದಾಬಾರೆಯರು ಕೋಳಿ ಕೂಗಿದ ಶಬ್ಧ ಕೇಳಿ ಬೆಳಗಾಯಿತೆಂದು ತಾವು ತಂದಿದ್ದ ಮೂರು ಹಾಸುಕಲ್ಲುಗಳನ್ನು ಅಲ್ಲೇ ಹಾಕಿದ್ದು ಆ ಮೂರು ಹಾಸುಕಲ್ಲುಗಳೂ ಇಂದಿಗೂ ಸ್ಮಾರಕ ರೂಪದಲ್ಲಿ ಕಾಂತಾಬಾರೆ ಬೂದಾಬಾರೆಯೆಂಬ ಕಾರಣಿಕ ಪುರುಷರು ಅಂದು ಇದ್ದರು ಎಂಬುದಕ್ಕೆ ಸಾಕ್ಷಿರೂಪವಾಗಿ ನಿಂತಿವೆ. ಪಡುವಣ ದಿಕ್ಕಿನಲ್ಲಿ ಪ್ರವೇಶದ್ವಾರ ಮಾತ್ರವಲ್ಲದೆ ಈ ಮೊದಲಿದ್ದ ಗೋಪುರವನ್ನು ಕೆಡವಲಾಗಿದ್ದು ಆ ಜಾಗದಲ್ಲಿ ವಿಶೇಷ ಸಭಾಂಗಣ ಮತ್ತು ವೈವಿಧ್ಯಮಯ ಕಾರ್ಯಕ್ರಮ ನಡೆಸುವ ನಿಟ್ಟಿನಲ್ಲಿ ಗೋಪುರ ನಿರ್ಮಿಸುವ ಯೋಜನೆಯೂ ಈ ಜೀರ್ಣೋದ್ಧಾರ ಕಾರ್ಯದಲ್ಲಿ ಅಡಕಗೊಂಡಿದ ಎಂದು ಕರ್ಕೇರ ಎಂದು ತಿಳಿಸಿದರು.

ಗರೋಡಿಗೆ ಸಂಬಂಧಪಟ್ಟ, ಅನಾದಿ ಕಾಲದಿಂದ ವಾಡಿಕೆಯಲ್ಲಿರುವಂಥ ಧ್ವಜಸ್ತಂಭಕ್ಕೆ ಈಗಾಗಲೇ ಸುಳ್ಯದಿಂದ ಮರ ಬಂದಿದ್ದು ಅದರ ಕೆತ್ತನೆ ಕೆಲಸ ಆರಂಭವಾಗಿದ್ದು ಬೇಗದಲ್ಲೆ ಆ ಮರಕ್ಕೆ ತಾಮ್ರ ಮುಚ್ಚಿ ಕ್ಷೇತ್ರದಲ್ಲಿ ನಿರ್ಮಾಣ ಮಾಡುವ ಉದ್ದೇಶವನ್ನು ಸಮಿತಿ ಇರಿಸಿಕೊಂಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪರಮಾನಂದ ವಿ. ಸಾಲ್ಯಾನ್, ಆಡಳಿತ ಸಮಿತಿ ಅಧ್ಯಕ್ಷ ಜಗನ್ನಾಥ ಆರ್ ಕೋಟ್ಯಾನ್, ಉಪಾಧ್ಯಕ್ಷ ಅನಿಲ್ ಪೂಜಾರಿ, ಕೋಶಾಧಿಕಾರಿ ಎಸ್. ದಯಾನಂದ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಶ್ರೀಧರ ಸುವರ್ಣ, ಕಾಂತುಲಕ್ಕಣ ಯಾನೆ ಪಟೇಲ್ ಮನೆತನದ ಪ್ರತಿನಿಧಿ ಲೀಲಾಧರ ಬಂಗೇರ, ಪ್ರಧಾನ ಅರ್ಚಕ ತೋಚೋಡಿ ಶೇಖರ ಪೂಜಾರಿ, ಅರ್ಚಕ ಸುರೇಶ್ ಪೂಜಾರಿ, ದಾಮೋದರ. ಪೂಜಾರಿ, ಆಡಳಿತ ಮಹಿಳಾ ಸಮಿತಿ ಅಧ್ಯಕ್ಷೆ ಶಕುಂತಳಾ ಭೋಜ ಬಂಗೇರ, ಜೀರ್ಣೋದ್ಧಾರ ಮಹಿಳಾ ಸಮಿತಿ ಅಧ್ಯಕ್ಷೆ ಪುಷ್ಪಾ ದಯಾನಂದ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಎಸ್.ಆರ್. ಪ್ರಭಾತ್, ಆಡಳಿತ ಸಮಿತಿ ಕಾರ್ಯದರ್ಶಿ ನವೀನ್ ಕುಮಾರ್, ಲೀಲಾಧರ ಬಂಗೇರ ದುಬೈ, ದಿನೇಶ್ ಪಿ. ಸಾಲ್ಯಾನ್ ಕೋಶಾಧಿಕಾರಿ ಮುಂಬೈ ಸಮಿತಿ, ನಿರಂಜನ ಪೂಜಾರಿ ಜಾರಂದಾಯ ದೈವಸ್ಥಾನ ನಡಿಕದ್ರು ಮತ್ತಿತರರು ಉಪಸ್ಥಿತರಿದ್ದರು.
ಕ್ಷೇತ್ರದ ಇತಿಹಾಸ:
ಸುರತ್ಕಲ್ ಖಂಡಿಗೆ ಬೀಡಿಗೂ ಸಸಿಹಿತ್ಲು ಶ್ರೀ ಉಳ್ಳಾಯ ದೈವಸ್ಥಾನಕ್ಕೆ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದ್ದು ವರ್ಷಂಪ್ರತಿ ಅಲ್ಲಿಂದ ಭಂಡಾರ ಬಂದು ಇಲ್ಲಿ ನೇಮೋತ್ಸವ ನಡೆಯುವ ಆ ಸಂಪ್ರದಾಯ ಇವತ್ತಿಗೂ ನಡೆಯುತ್ತಾ ಬಂದಿದೆ.
ಇದರ ಜತೆಗೆ ಜೀರ್ಣೋದ್ಧಾರ ಕಾರ್ಯವು ಸುಸೂತ್ರವಾಗಿ ನಡೆಯುವ ನಿಟ್ಟಿನಲ್ಲಿ ಊರಿನ ಪ್ರಧಾನ ಆಡಳಿತ ಸಮಿತಿ ಮಾತ್ರವಲ್ಲದೆ ಜೀರ್ಣೋದ್ಧಾರ ಸಮಿತಿ, ಮಹಿಳಾ ಸಮಿತಿಯನ್ನು ಊರಿನಲ್ಲಿ ರಚನೆ ಮಾಡಲಾಗಿದೆಯಲ್ಲದೆ ನಿಧಿ ಕ್ರೋಡೀಕರಿಸಿ ಹೊರನಾಡಿನಲ್ಲಿರುವವರನ್ನೂ ಸಂಘಟಿಸುವ ನಿಟ್ಟಿನಲ್ಲಿ ಮುಂಬೈಯಲ್ಲಿ ವಿಶೇಷ ಸಮಿತಿ ರಚನೆಗೊಂಡಿದೆ. ಬೆಂಗಳೂರು ಹಾಗೂ ಇತರ ಬೇರೆ ಕಡೆಗಳಲ್ಲೂ ಸಮಿತಿಗಳನ್ನು ರಚಿಸಿ ಈ ಕಾರ್ಯದಲ್ಲಿ ಗ್ರಾಮಸ್ಥರು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದಾರೆ. ಇಲ್ಲಿನ ಹಲವು ಕೆಲಸಗಳು ಭಕ್ತರಿಂದಲೇ ಕರಸೇವೆಯ ಮೂಲಕ ನಡೆಯುತ್ತಿರುವುದು ಶ್ರದ್ಧಾಭಕ್ತಿಯಿಂದ ಎಲ್ಲ ಭಕ್ತರು ಕೈ ಜೋಡಿಸಿ ಕ್ಷೇತ್ರದ ಏಳಿಗೆಗೆ ಶ್ರಮಿಸುವುದರಿಂದಾಗಿ ನಿರ್ಮಾಣ ಪೂರ್ಣ ಹಂತದಲ್ಲಿರುವುದಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ 2026 ನೇ ಫೆಬ್ರವರಿ 5ರಂದು ಹೊರೆಕಾಣಿಕೆ, 7ರಂದು ಖಂಡಿಗೆಯಿಂದ ಭಂಡಾರ ಆಗಮನ, 8ಕ್ಕೆ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಉತ್ಸವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಧಾರ್ಮಿಕ ಸಭೆಯಲ್ಲಿ ಗಣ್ಯರ, ಅತಿಥಿಗಳ ಸಮ್ಮುಖದಲ್ಲಿ ದಾನಿಗಳಿಗೆ ಸನ್ಮಾನ ಹಾಗೂ ಫೆಬ್ರವರಿ 9 ರಂದು ಶ್ರೀ ಉಳ್ಳಾಯ, ಓಡ್ಯಂತಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.