ಪಟಾಕಿ ಮಾರಾಟಗಾರರಿಗೆ ಎಪಿಎಂಸಿಯಿಂದ ₹1.45 ಲಕ್ಷ ಹೆಚ್ಚುವರಿ ಶುಲ್ಕ! ನಾಲ್ಕು ದಿನದ ಅಂಗಡಿಗೆ ಲಕ್ಷಾಂತರ ರೂ. ಬಾಡಿಗೆ: ವ್ಯಾಪಾರಸ್ಥರ ಆಕ್ರೋಶ

ಮಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆ ಪಟಾಕಿ ವ್ಯಾಪಾರಸ್ಥರು ಎಪಿಎಂಸಿ ವಿಧಿಸಿದ ಹೆಚ್ಚುವರಿ ಶುಲ್ಕದಿಂದ ಕಂಗಾಲಾಗಿದ್ದಾರೆ. ಮಂಗಳೂರು ಬೈಕಂಪಾಡಿ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ತಾತ್ಕಾಲಿಕವಾಗಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು (ಎಪಿಎಂಸಿ) ವ್ಯಾಪಾರಸ್ಥರಿಗೆ ಹೆಚ್ಚುವರಿ ₹1,45,000 ಹಾಗೂ ಜಿಎಸ್‌ಟಿ ಪಾವತಿಸಬೇಕು ಎಂದು ನೋಟೀಸ್ ನೀಡಿದೆ.

ಷರತ್ತು ಉಲ್ಲಂಘನೆ ನಡೆದಿದರೆ, ಬಾಕಿ ಹಣ ತಕ್ಷಣ ಪಾವತಿಸದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೋಟೀಸಿನಲ್ಲಿ ಎಚ್ಚರಿಸಲಾಗಿದೆ.

19*11 ಅಡಿಗೆ ಲಕ್ಷ ಬಾಡಿಗೆ!

ದೀಪಾವಳಿಯ ಸಂದರ್ಭದಲ್ಲಿ ಅಕ್ಟೋಬರ್ 20ರಿಂದ 22ರವರೆಗೆ ಹಸಿರು ಪಟಾಕಿ ಮಾರಾಟಕ್ಕೆ 6×6 ಅಡಿ ಸ್ಥಳವನ್ನು ದಿನಕ್ಕೆ ₹9,000 ಬಾಡಿಗೆಯ ಷರತ್ತಿನಲ್ಲಿ ನೀಡಲಾಗಿತ್ತು. ಆದರೆ, ವ್ಯಾಪಾರಸ್ಥರು 19×11 ಅಡಿ ವಿಸ್ತೀರ್ಣದ ಅಂಗಡಿಗಳನ್ನು ನಿರ್ಮಿಸಿ ವ್ಯಾಪಾರ ನಡೆಸಿದ ಕಾರಣ, ಷರತ್ತು ಉಲ್ಲಂಘನೆಯಾಗಿದೆ ಎಂದು ಎಪಿಎಂಸಿ ನೊಟೀಸ್‌ನಲ್ಲಿ ಹೇಳಿದೆ.

ಮಂಗಳೂರು ಮಹಾನಗರಪಾಲಿಕೆಯ ಬಹಿರಂಗ ಹರಾಜಿನಲ್ಲಿ ಇದೇ ರೀತಿಯ ಸ್ಥಳಕ್ಕೆ ರೂ.6,900 ನೆಲಬಾಡಿಗೆ + ರೂ.1,000 ಪರವಾನಗಿ ಶುಲ್ಕ + ಜಿಎಸ್‌ಟಿ ವಿಧಿಸಲಾಗಿತ್ತು. ಆದರೆ, ಎಪಿಎಂಸಿಯು ₹9,000 ವಸೂಲಿಸಿತ್ತು. ಇದೀಗ ಸ್ಥಳದ ವಿಸ್ತೀರ್ಣ ಹೆಚ್ಚಾಗಿದೆ ಎಂಬ ಕಾರಣದಿಂದ ₹1.45 ಲಕ್ಷ ಹೆಚ್ಚುವರಿ ಶುಲ್ಕ ವಿಧಿಸಿದೆ.

ನೆಲದಲ್ಲಿ ನೀರು ತುಂಬಿತ್ತು
ಪಟಾಕಿ ವ್ಯಾಪಾರಸ್ಥರ ಪ್ರಕಾರ, ಎಪಿಎಂಸಿಯು ನೀಡಿದ ಸ್ಥಳ ನೀರು ತುಂಬಿದ ಗದ್ದೆ ಆಗಿತ್ತು. ಅಲ್ಲದೆ, ಅದರ ಮೇಲ್ಭಾಗದಲ್ಲಿ ಹೈಟೆನ್ಶನ್ ವಿದ್ಯುತ್ ತಂತಿಗಳು ಹಾದು ಹೋಗುತ್ತಿದ್ದು, ಮಾರಾಟ ಸ್ಥಳವೇ ಅಪಾಯಕಾರಿಯಾಗಿತ್ತು.

ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿ, “ಮಳೆ ನೀರಿನಲ್ಲಿ ಪಟಾಕಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಉಂಟಾಯಿತು. ಸ್ಥಳದ ಸೌಲಭ್ಯ ಇಲ್ಲದಿದ್ದರೂ ಎಪಿಎಂಸಿ ಅಧಿಕಾರಿಗಳು ಹೆಚ್ಚುವರಿ ಹಣ ಕೇಳುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೌಡಿಶೀಟರ್‌ಗಳೇ ವಾಸಿ: ವ್ಯಾಪಾರಿಗಳಿಂದ ವ್ಯಂಗ್ಯ

ಇತತ್ತೀಚೆಗೆ ಬಜ್ಪೆ ರೌಡಿಶೀಟರ್‌ಗಳಿಂದ ಪಟಾಕಿ ವ್ಯಾಪಾರಸ್ಥರ ಹಪ್ತಾ ವಸೂಲಿ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿತ್ತು. ಆದರೆ ವ್ಯಾಪಾರಸ್ಥರ ಪ್ರಕಾರ, “ಈ ಬಾರಿ ನಿಜವಾದ ‘ಹಪ್ತಾ’ ಎಪಿಎಂಸಿ ಕಚೇರಿಯಲ್ಲೇ ನಡೆಯುತ್ತಿದೆ. ಕೆಲ ಅಧಿಕಾರಿಗಳು ಪ್ರತಿ ಅಂಗಡಿಗೆ ₹1.5 ಲಕ್ಷದಿಂದ ₹3 ಲಕ್ಷದವರೆಗೆ ‘ಲೀಗಲ್ ಹಪ್ತಾ’ ಕೇಳುತ್ತಿದ್ದಾರೆ. ಕೇವಲ ನಾಲ್ಕು ದಿನದ ಪಟಾಕಿ ಅಂಗಡಿಗೆ ಇಷ್ಟು ಹಣ ಕೇಳುವವರಿಗಿಂತ ಬಜ್ಪೆ ರೌಡಿಶೀಟರ್‌ಗಳೇ ಉತ್ತಮ!” ಎಂದು ನೊಂದ ವ್ಯಾಪಾರಿಗಳು ವ್ಯಂಗ್ಯವಾಡಿದ್ದಾರೆ.

error: Content is protected !!