ಪ್ರತಿಭಾವಂತ ಬಿಲ್ಲವ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ!: ವಿದ್ಯಾರ್ಥಿ ವೇತನ ಪಡೆಯಲು ಸುವರ್ಣಾವಕಾಶ!

ಮಂಗಳೂರು: ದಾಮೋದರ ಆ‌ರ್.ಸುವರ್ಣರ 101 ನೇ ಜನ್ಮಜಯಂತಿಯ ಸ್ಮರಣೆಯೊಂದಿಗೆ ದಾಮೋದರ ಆ‌ರ್.ಸುವರ್ಣ ಟ್ರಸ್ಟ್ ವತಿಯಿಂದ ಬಿಲ್ಲವ ಸಮಾಜದ ಬಡ ಕುಟುಂಬದ ವೃತ್ತಿಪರ ಶಿಕ್ಷಣ ಮಾಡುತ್ತಿರುವ ಸುಮಾರು 500ರಕ್ಕೂ ಮಿಕ್ಕಿ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿಗೆ ನೀಡಲಾಗುವ ಸುಮಾರು ₹50 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭವು ಡಿಸೆಂಬರ್‌ 21ರಂದು ಆದಿತ್ಯವಾರ ಬೆಳಿಗ್ಗೆ 10.00 ಘಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.), ಕುದ್ರೋಳಿ, ಮಂಗಳೂರು ಇದರ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕರಾವಳಿ ಭಾಗದಲ್ಲಿ ಬಿಲ್ಲವ ಸಮಾಜವನ್ನು ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಸಂಘಟಿಸುವ ನಿಸ್ವಾರ್ಥ ಕಾರ್ಯವನ್ನು ಆದ್ಯತೆ ಮೇರೆಗೆ ನಡೆಸಿರುವ ದಿವ್ಯ ಚೇತನ ದಾಮೋದರ ಆರ್.ಸುವರ್ಣ ಆಗಿದ್ದಾರೆ. ಇವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಸಮಾಜಕ್ಕೆ ಚೈತನ್ಯದ ಶಕ್ತಿಯನ್ನು ನೀಡಿದ ಮಹಾಪುರುಷರು. ತಮ್ಮ ಸ್ವಂತ ಆದಾಯವನ್ನು ಸಮಾಜದ ಕಾರ್ಯಕ್ಕಾಗಿ ವಿನಿಯೋಗಿಸಿ ಸಮಾಜದ ಬಡ ಕುಟುಂಬದ ಮಕ್ಕಳು ಆರ್ಥಿಕ ದುಸ್ಥಿತಿ ಕಾರಣಕ್ಕಾಗಿ ವಿದ್ಯೆಯಿಂದ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಪ್ರಥಮವಾಗಿ ಮಂಗಳೂರಿನ ಕುದ್ರೋಳಿಯಲ್ಲಿ ನಾರಾಯಣ ಗುರು ವಿದ್ಯಾ ಸಂಸ್ಥೆಯನ್ನು ಆರಂಭಿಸಿ, ಇಡೀ ಜಿಲ್ಲೆಯಲ್ಲಿ ಅತೀ ಕಡಿಮೆ ಶುಲ್ಕದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡಿರುವ ಶಿಕ್ಷಣದಾತರಾಗಿದ್ದರು ಎಂದು ನವೀನ್‌ ಚಂದ್ರ ಸುವರ್ಣ ನೆನಪಿಸಿದರು.

ಟ್ರಸ್ಟ್‌ ಕಚೇರಿಯಲ್ಲಿ ಅರ್ಜಿ ಫಾರ್ಮ್‌: ನ.15 ಕಡೇ ದಿನ
ಈ ನಿಮಿತ್ತ ಮಂಗಳೂರಿನ ಉಜ್ಜೋಡಿ ಮಹಾಕಾಳಿ ದೇವಸ್ಥಾನದ ಎದುರು ಇರುವ ದಾಮೋದರ ಸುವರ್ಣ ಎಜುಕೇಶನ್ ಟ್ರಸ್ಟ್ ಕಛೇರಿ (ಪೆಟ್ರೋಲ್ ಬಂಕ್ ಹತ್ತಿರ)ಯಲ್ಲಿ ಈ ವಿದ್ಯಾರ್ಥಿ ವೇತನದ ಅರ್ಜಿಫಾರ್ಮ್ ನೀಡಲಾಗುವುದು. ವಿದ್ಯಾರ್ಥಿ ವೇತನವನ್ನು ಪಡೆಯಲು ಬಿಲ್ಲವ ಸಮಾಜದ ವಿದ್ಯಾರ್ಥಿಗಳು PUC ಯಲ್ಲಿ ಕನಿಷ್ಠ 75% ಅಂಕದಲ್ಲಿ ತೇರ್ಗಡೆಯಾಗಿರುವ ಮಾರ್ಕ್ಸ್ ಕಾರ್ಡ್ ಪ್ರತಿ, ಬಿ.ಪಿ.ಎಲ್. ಕಾರ್ಡ್, ಸ್ಥಳೀಯ ಬಿಲ್ಲವ ಸಂಘದ ಶಿಫಾರಾಸಿನೊಂದಿಗೆ ಅರ್ಜಿಯನ್ನು ಇದೇ ನವಂಬರ್ 15 ರ ಒಳಗೆ ಟ್ರಸ್ಟ್ ನ ಕಛೇರಿಗೆ ಸಲ್ಲಿಸಬೇಕು.

ಬಳಿಕ ಸೂಕ್ತ ಪರಿಶೀಲನೆಯನ್ನು ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಲಾಗುವುದು. ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದ ದಿನ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಹೆತ್ತವರು ಅಥವಾ ಪೋಷಕರೊಂದಿಗೆ ತಮಗೆ ಬಂದಿರುವ ಮಾಹಿತಿ ಪತ್ರದ ಜತೆಯಲ್ಲಿ ಹಾಜರಾಗುವಂತೆ ವಿನಂತಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ದಾಮೋದರ ಸುವರ್ಣ ಎಜುಕೇಶನ್‌ ಟ್ರಸ್ಟ್‌ (ರಿ.) ಅಧ್ಯಕ್ಷ ಉದಯಚಂದ್ರ ಡಿ. ಸುವರ್ಣ, ಉದ್ಯಮಿ ವಿನಯಚಂದ್ರ ಡಿ. ಸುವರ್ಣ ಉಪಸ್ಥಿತರಿದ್ದರು.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

error: Content is protected !!