ಹಳೆಯಂಗಡಿ: ಹಳೆಯಂಗಡಿ ಪೇಟೆಯಲ್ಲಿರುವ ಮಂಗಳೂರಿಗೆ ತೆರಳುವ ಬಸ್ ನಿಲ್ದಾಣದಲ್ಲಿ ಕುಳಿತಾಗ ಸೊಳ್ಳೆ ಕಚ್ಚಿದರೆ ಡೆಂಗ್ಯೂ ಮಲೇರಿಯಾ ಗ್ಯಾರಂಟಿ! ಯಾಕೆಂದರೆ ಪ್ರತಿದಿನ ನೂರಾರು ಪ್ರಯಾಣಿಕರು ಬಸ್‌ಗಾಗಿ ಕಾಯುವ ಬಸ್ ತಂಗುದಾಣದ ಹಿಂಬದಿಯಲ್ಲಿ ನಿಂತಿರುವ ನೀರು ಮತ್ತು ತ್ಯಾಜ್ಯಗಳಿಂದಾಗಿ ಈ ಸ್ಥಳವು ಡೆಂಗ್ಯೂ, ಮಲೇರಿಯಾ ಹಂತದ ಆರೋಗ್ಯ ಹದಗೆಡಿಸುವ ತಾಣವಾಗಿ ಪರಿಣಮಿಸಿದೆ.





ಬಸ್ ಸ್ಟ್ಯಾಂಡ್ ಹಿಂಬದಿಯಲ್ಲಿ ನಿಂತಿರುವ ನೀರು ಕ್ರಿಮಿ-ಕೀಟಗಳ ಆವಾಸ ಸ್ಥಾನವಾಗಿದ್ದು, ಸೊಳ್ಳೆಗಳು ಪ್ರಯಾಣಿಕರನ್ನು ನಿರಂತರ ಕಚ್ಚುವ ಘಟನೆಗಳು ವರದಿಯಾಗುತ್ತಿವೆ. ಅಲ್ಲದೆ ನೀರಲ್ಲಿ ಕಸ, ಬಾಟಲಿಗಳು ತುಂಬಿದ್ದು ನೀರು ಸಂಪೂರ್ಣ ಕೆಟ್ಟುಹೋಗಿದೆ. ಈ ಪರಿಸ್ಥಿತಿಯಿಂದ ಪ್ರಯಾಣಿಕರು ಭಯಗೊಂಡು ಸ್ಥಳದಲ್ಲಿ ಕುಳಿತುಕೊಳ್ಳುವುದನ್ನೇ ತಪ್ಪಿಸುತ್ತಿದ್ದಾರೆ. ಹೀಗಾಗಿ, ಜನರಿಗೆ ಈ ಬಸ್ ಸ್ಟ್ಯಾಂಗ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ಸ್ಥಳೀಯ ಪುಸ್ತಕ ಆಸಕ್ತ ಸಂಘಟನೆಗಳು ಕೆಲವು ವರ್ಷಗಳ ಹಿಂದೆ ಸ್ಥಳದಲ್ಲಿ ಪುಸ್ತಕಗೃಹವನ್ನು ಸ್ಥಾಪಿಸಿದ್ದರು. ಆದರೆ, ನಿರ್ಲಕ್ಷ್ಯ ಮತ್ತು ಕಾಳಜಿ ಕೊರತೆಯಿಂದ ಆ ಪುಸ್ತಕಗೃಹವು ಹಾಳಾಗಿ, ಪುಸ್ತಕಗಳು ಕಸ ಸೇರಿದೆ.. ಬಸ್ ನಿಲ್ದಾಣದ ಮುಂದೆ ಹುಲ್ಲುಗಳು ಇನ್ನಿಲ್ಲದಂತೆ ಬೆಳೆದಿದ್ದು, ಸ್ವಚ್ಛತೆ ಮತ್ತು ನಿರ್ವಹಣೆ ಪೂರ್ತಿಯಾಗಿ ಇಲ್ಲದಿರುವುದು ಸ್ಪಷ್ಟವಾಗಿದೆ.
ಈ ಎಲ್ಲಾ ಅಸಹ್ಯ ಪರಿಸ್ಥಿತಿಗಳಿಗೆ ಮುಖ್ಯ ಕಾರಣ ಸ್ಥಳೀಯ ಪಂಚಾಯತ್‌ನ ನಿರ್ಲಕ್ಷ್ಯ. ಬಸ್ ಸ್ಟ್ಯಾಂಡ್ ನಿರ್ಮಾಣದ ಬಳಿಕ ಸ್ಥಳೀಯ ಆಡಳಿತ ಸರಿಯಾದ ನಿರ್ವಹಣೆ ನಡೆಸಿಲ್ಲ. ಬಸ್ ನಿಲ್ದಾಣದ ಸ್ವಚ್ಛತೆ, ನೀರು ನಿಂತಿರುವ ಪ್ರದೇಶಗಳ ನಿಯಂತ್ರಣ ಮತ್ತು ಕೀಟನಾಶಕ ಕ್ರಮಗಳನ್ನು ಕೈಗೊಂಡಿಲ್ಲ. ಇದರ ಪರಿಣಾಮವಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದ್ದು, ಯಾವುದೇ ತುರ್ತು ಕ್ರಮ ತೆಗೆದುಕೊಳ್ಳದಿದ್ದರೆ, ಹೆಚ್ಚಿನ ಅಪಾಯ ಎದುರಾಗಬಹುದು.
ಈ ಸಂದರ್ಭದಲ್ಲಿ, ಸ್ಥಳೀಯ ಪಂಚಾಯತ್ ಅಧಿಕಾರಿಗಳು ತಕ್ಷಣ ಕ್ರಮ ಕೈಗೆತ್ತಿಕೊಳ್ಳಬೇಕೆಂದು ಸಾರ್ವಜನಿಕರು ಹಾಗೂ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. ಬಸ್ ಸ್ಟ್ಯಾಂಡ್ ಹಿಂಬದಿ ನೀರನ್ನು ತೆಗೆಯುವುದು, ಕೀಟನಾಶಕ ಬಳಸುವುದು, ಹೂಳು ಕತ್ತರಿಸುವುದು ಮತ್ತು ಸ್ವಚ್ಛತಾ ನಿರ್ವಹಣೆ ಸ್ಥಿರಗೊಳಿಸುವುದರೊಂದಿಗೆ, ಜನರಿಗೆ ಬಸ್ ಸ್ಟ್ಯಾಂಡನ್ನು ಅನುಕೂಲಕರವಾಗಿ ಪರಿವರ್ತಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

