ಸುರತ್ಕಲ್: ನಗರದ ಮುಕ್ಕ ಪ್ರದೇಶದಲ್ಲಿರುವ ಶ್ರೀನಿವಾಸ ಆಸ್ಪತ್ರೆ, ಇನ್ಸ್ಟಿಟ್ಯೂಷನ್ ಹಾಗೂ ಕಾಲೇಜುಗಳ ಎದುರಿನ ಬಸ್‌ಸ್ಟ್ಯಾಂಡ್ ಇಂದು ಸಾರ್ವಜನಿಕರಿಗೆ ಕಂಟಕವಾಗಿದೆ. ಬಸ್ ನಿಲ್ದಾಣದ ಮಧ್ಯದಲ್ಲೇ ಬಿದ್ದಿರುವ ದೊಡ್ಡ ಗುಂಡಿಯಲ್ಲಿ ದಿನವೂ ಮಳೆನೀರು ನಿಂತು ದುರ್ವಾಸನೆ ಹರಡುತ್ತಿದೆ ಮಾತ್ರವಲ್ಲದೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಇಲ್ಲಿ ವಿದ್ಯಾರ್ಥಿಗಳು, ರೋಗಿಗಳು, ಹಿರಿಯರು, ಮಹಿಳೆಯರು ಬಸ್‌ಸ್ಟಾಪ್‌ನಲ್ಲಿ ಬಸ್ ಹತ್ತುವುದು ಹತ್ತುವುದು ಒಂದು ಸಾಹಸದಂತಾಗಿದೆ.

ಪ್ರತಿದಿನ ನೂರಾರು ಮಂದಿ ಈ ನಿಲ್ದಾಣದಿಂದ ಬಸ್ ಪ್ರಯಾಣ ಮಾಡುತ್ತಾರೆ. ಇದೇ ಜಾಗದಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳು ಹಾಗೂ ಸರ್ವಿಸ್ ಬಸ್‌ಗಳು ನಿಲ್ಲುವ ಕಾರಣದಿಂದ, ಬಸ್ ಹತ್ತುವ ವೇಳೆ ಪ್ರಯಾಣಿಕರು ಮಳೆನೀರಿನಲ್ಲಿ ಕಾಲಿಟ್ಟು ಸ್ಲಿಪ್ ಆಗುವ ಸ್ಥಿತಿ ಉಂಟಾಗಿದೆ. ಬಸ್ ಚಲಿಸಿದ ಕ್ಷಣದಲ್ಲೇ ಗುಂಡಿಯಲ್ಲಿನ ನೀರು ಪಕ್ಕದಲ್ಲಿ ನಿಂತಿರುವ ಜನರ ಮೇಲೆ ಎರಚಿ ತೊಂದರೆ ಉಂಟುಮಾಡುತ್ತಿದೆ.
ಸ್ಥಳೀಯ ನಿವಾಸಿಗಳು ಹಾಗೂ ವಿದ್ಯಾರ್ಥಿಗಳು ಹಲವು ಬಾರಿ ಈ ಕುರಿತು ದೂರು ನೀಡಿದರೂ ಮಹಾನಗರ ಪಾಲಿಕೆ ಹಾಗೂ ಹೆದ್ದಾರಿ ಇಲಾಖೆಯಿಂದ ಸ್ಪಂದನೆ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಪ್ರದೇಶದಲ್ಲಿನ ರಸ್ತೆ ದಿನದಿಂದ ದಿನಕ್ಕೆ ಹಾಳಾಗುತ್ತಿದ್ದು, ಸಾರ್ವಜನಿಕರ ಅಸಮಾಧಾನ ತಾರಕಕ್ಕೇರಿದೆ.

“ಇದು ಆಸ್ಪತ್ರೆ, ಕಾಲೇಜು ಇರುವ ಪ್ರಮುಖ ಪ್ರದೇಶ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ರೋಗಿಗಳು ಸಂಚಾರ ಮಾಡುತ್ತಾರೆ. ಬಸ್‌ಸ್ಟ್ಯಾಂಡ್ ಎದುರಿನ ರಸ್ತೆ ಸ್ಥಿತಿ ಹದಗೆಟ್ಟರೂ ಯಾರಿಗೂ ಚಿಂತೆ ಇಲ್ಲ. ಬಸ್ ಬಂದಾಗ ನೀರು ಎರಚಿ ಜನರ ಬಟ್ಟೆ ಬದಲಿಸುವ ಪರಿಸ್ಥಿತಿ ಇದೆ.” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೆಲವರು, “ರಸ್ತೆ ಕಾಮಗಾರಿಗೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುವ ಅಧಿಕಾರಿಗಳು ಇಂತಹ ಗುಂಡಿಗಳನ್ನು ಮುಚ್ಚದೆ ಜನಜೀವನಕ್ಕೆ ಮಹತ್ವದ ಸ್ಥಳಗಳ ಕಡೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಈಗಲೇ ಕ್ರಮ ಕೈಗೊಳ್ಳದಿದ್ದರೆ ನಾವು ಸಾರ್ವಜನಿಕರಾಗಿ ಪ್ರತಿಭಟನೆಗೆ ಇಳಿಯುತ್ತೇವೆ,” ಎಂದು ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಮಹಾನಗರ ಪಾಲಿಕೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಂದ ತಕ್ಷಣ ಕ್ರಮದ ನಿರೀಕ್ಷೆ ವ್ಯಕ್ತಪಡಿಸಿದ್ದು, ಬಸ್‌ಸ್ಟ್ಯಾಂಡ್ ಪ್ರದೇಶದ ಗುಂಡಿಯನ್ನು ಸರಿಪಡಿಸಿ ನಿತ್ಯದ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ನಗರದ ಸ್ವಚ್ಛತೆ, ಸೌಕರ್ಯ ಮತ್ತು ನಾಗರಿಕ ಭದ್ರತೆಗಾಗಿ ಈ ಬಸ್‌ಸ್ಟಾಪ್‌ನ ಸ್ಥಿತಿ ಪರಿಷ್ಕರಿಸದಿದ್ದರೆ ಅದು ನಿಜಕ್ಕೂ ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯದ ನಿದರ್ಶನವೆಂದು ನಾಗರಿಕರು ಟೀಕಿಸಿದ್ದಾರೆ.
