ಕುಂಬಳೆ: ಕುಂಬಳೆ ಆರಿಕ್ಕಾಡಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಾಣಗೊಳ್ಳುತ್ತಿರುವ ಟೋಲ್ ಗೇಟ್ ಸಮೀಪ ಹಂಪ್ ನಿರ್ಮಾಣದ ವಿರುದ್ಧ ನಾಗರಿಕರು ಹಾಗೂ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹಂಪ್ ನಿರ್ಮಾಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದ್ದು, ಎರಡು ದಿನಗಳಿಂದ ಆಂಬ್ಯುಲೆನ್ಸ್ ಸೇರಿದಂತೆ ವಾಹನಗಳು ಗಂಟೆಗಳ ಕಾಲ ಸಿಲುಕಿಕೊಳ್ಳುವಂತಾಗಿದೆ. ಇದರಿಂದ ರೊಚ್ಚಿಗೆದ್ದ ನಾಗರಿಕರು ಹಾಗೂ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಹಂಪ್ ನಿರ್ಮಾಣಕ್ಕೆ ತಡೆಯಲಾಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಸ್ಥಳಕ್ಕೆ ತಲುಪಿ ಪರಿಸ್ಥಿತಿ ತಿಳಿಗೊಳಿಸಿದರು. ಪ್ರತಿಭಟನೆ ಹಿನ್ನಲೆಯಲ್ಲಿ ಹಂಪ್ ನಿರ್ಮಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಯಿತು.

ಸಂಚಾರಕ್ಕೆ ತಡೆಯಾಗದಂತೆ ಈಗ ಅಳವಡಿಸುವ ಹಂಪ್ ಗಳನ್ನು ತೆರವುಗೊಳಿಸುವ ಬಗ್ಗೆ ಅಧಿಕಾರಿಗಳು ಹಾಗೂ ಪೊಲೀಸರು ಭರವಸೆ ನೀಡಿದರು. ಹಂಪ್ ನಿರ್ಮಾಣ ಹಾಗೂ ಇತರ ಕಾಮಗಾರಿ ನಡೆಯುತ್ತಿರುವುದರಿಂದ ಕೆಲ ದಿನಗಳಿಂದ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.