ಮೂಡುಬಿದಿರೆ: ವ್ಯಕ್ತಿಯೋರ್ವರು ಟ್ರ್ಯಾಕ್ಟರ್ ಸಹಿತ ಬಾವಿಗೆ ಬಿದ್ದು ಅಸುನೀಗಿದ ಘಟನೆ ಮೂಡಬಿದ್ರೆ ವ್ಯಾಪ್ತಿಯ ನೆಲ್ಲಿಕಾರ್ ಎಂಬಲ್ಲಿ ಸಂಭವಿಸಿದೆ. ಮಾಂಟ್ರಾಡಿ ಕೊಂಬೆಟ್ಟು ನಿವಾಸಿ ರಾಜೇಶ್ (38) ಮೃತ ದುರ್ದೈವಿ.
ಘಟನೆಯ ವಿವರ: ರಾಜೇಶ್ ತನ್ನ ಸಂಬಂಧಿಕರೋರ್ವರ ಟ್ರ್ಯಾಕ್ಟರನ್ನು ಕೊಂಬೆಟ್ಟು ಮನೆ ಪಕ್ಕದ ಬಾವಿಯ ಪಕ್ಕ ನಿಲ್ಲಿಸಿ ತೊಳೆಯುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್ ಇದ್ದಕ್ಕಿದ್ದಂತೆ ಮುಂದಕ್ಕೆ ಚಲಿಸಲಾರಂಭಿಸಿದ್ದು, ಅದನ್ನು ನಿಲ್ಲಿಸಲು ರಾಜೇಶ್ ಮುಂದಾಗಿದ್ದಾರೆ. ಆದರೆ ನಿಯಂತ್ರಣಕ್ಕೆ ಸಿಗದ ಟ್ರ್ಯಾಕ್ಟರ್ ರಾಜೇಶ್ ಅವರ ಸಮೇತ ಬಾವಿಗೆ ಬಿದ್ದಿದೆ. ಬಾವಿಗೆ ಬಿದ್ದ ರಾಜೇಶ್ ನೀರಿನಿಂದ ಮೇಲೆ ಬಾರಲಾರದೆ ಒದ್ದಾಟ ನಡೆಸಿ ಅಲ್ಲೇ ಅಸುನೀಗಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ದೀಪಾವಳಿಯ ಸಂಭ್ರಮದಲ್ಲಿದ್ದ ಮನೆಯಲ್ಲಿ ರಾಜೇಶ್ ಸಾವು ಮನೆಮಂದಿಯನ್ನು ದುಃಖದ ಅಂಧಕಾರಕ್ಕೆ ದೂಡಿದೆ.