ಲಾಲ್‌ಬಾಗ್‌ ಸರಣಿ ಕಳವು ಆರೋಪಿಗಳನ್ನು ಕೇವಲ 20 ಗಂಟೆಯಲ್ಲಿ ಬಂಧಿಸಿದ ಉರ್ವ ಪೊಲೀಸರು

ಮಂಗಳೂರು: ನಗರದ ದೇರೆಬೈಲ್ ಲಾಲ್ ಬಾಗ್ ಹ್ಯಾಟ್ ಹಿಲ್ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಉರ್ವಾ ಪೊಲೀಸರು ಕೇವಲ 20 ಗಂಟೆಗಳಲ್ಲಿ ಇಬ್ಬರು ಅಂತರರಾಜ್ಯ ಮನೆ ಕಳವು ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಅಸ್ಸಾಮಿನ ಕಾಚಾರ್‌ ಜಿಲ್ಲೆಯ ಮೆಹರ್‌ಪುರಿ ಗ್ರಾಮದ ಪಾಂಚಗೋರಿ ಮೇಡಿನೋವಾ ರಸ್ತೆ ಸಮೀಪದ ಅಂಬಿಕಾ ಪುರ್ ಪಾರ್ಟ್ 10 ನಿವಾಸಿ ಅಭಿಜಿತ್(24) ಹಾಗೂ ಇದೇ ಪ್ರದೇಶದ ಶ್ರೀ ದುರ್ಗಾ ಮಂದಿರದ ಪಕ್ಕದ ನಿವಾಸಿ ದೇಬಾ ದಾಸ್‌(21) ಬಂಧಿತ ಆರೋಪಿಗಳು.

ಅ.19-20ರ ರಾತ್ರಿ ಉರ್ವಾ ಠಾಣಾ ವ್ಯಾಪ್ತಿಯ ದೇರೆಬೈಲ್ ಗ್ರಾಮದ ಲಾಲ್ ಬಾಗ್ ಹ್ಯಾಟ್ ಹಿಲ್‌ನ ಮೂರು ಫ್ಲ್ಯಾಟ್‌ಗಳಲ್ಲಿ ಸರಣಿ ಕಳ್ಳತನ ನಡೆದಿತ್ತು. ಈ ಕುರಿತು ರಿಯಾಜ್ ರಶೀದ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

ಮೂರು ಫ್ಲ್ಯಾಟ್‌ಗಳಿಂದ ಕಳ್ಳರು ಚಿನ್ನಾಭರಣ, ನಗದು, ವಿದೇಶಿ ಕರೆನ್ಸಿ ಮತ್ತು ಮೊಬೈಲ್‌ಗಳನ್ನು ಕದಿಯಲಾಗಿತ್ತು. ಪ್ರಕರಣದ ತನಿಖೆಯ ಭಾಗವಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉರ್ವಾ ಠಾಣಾಧಿಕಾರಿ ಮತ್ತು ಸಿಬ್ಬಂದಿ, ಶ್ವಾನ ದಳ ಹಾಗೂ ಫಿಂಗರ್‌ಪ್ರಿಂಟ್ ತಜ್ಞರು ಸ್ಥಳ ಪರಿಶೀಲನೆ ನಡೆಸಿ ಅಲ್ಲಿ ಸಿಕ್ಕ ಸುಳಿವಿನ ಆಧಾರಲ್ಲಿ ಮರುದಿನ ಅಂದರೆ ಅ.21ರಂದೇ ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉರ್ವ ಪೊಲೀಸರ ಕಾರ್ಯಾಚರಣೆಗೆ ಬೆಂಗಳೂರಿನ ಪೊಲೀಸರು ಕೂಡ ಸಾಥ್‌ ನೀಡಿದ್ದಾರೆ.

ಪೊಲೀಸರು ಆರೋಪಿಗಳಿಂದ ಕದ್ದ ಚಿನ್ನಾಭರಣ, ₹5,000 ನಗದು, 3,000 ದಿರ್ಹಮ್ ಹಾಗೂ ₹70,000 ಮೌಲ್ಯದ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಅಭಿಜಿತ್ ದಾಸ್ ವಿರುದ್ಧ ಹಿಂದೆಯೂ ಬೆಂಗಳೂರು ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಹಲವು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಡಿ.ಸಿ.ಪಿ (ಕ್ರೈಮ್) ಅವರ ಮೇಲ್ವಿಚಾರಣೆಯಲ್ಲಿ, ಕೇಂದ್ರ ಉಪ ವಿಭಾಗದ ಎಸಿಪಿ, ಉರ್ವಾ ಪೊಲೀಸ್ ಠಾಣೆಯ ಪಿ.ಐ ಮತ್ತು ಸಿಬ್ಬಂದಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಮಂಗಳೂರು ಪೊಲೀಸ್‌ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

error: Content is protected !!