ಉಡುಪಿ: ನಾಲ್ವರ ಹೆಸರನ್ನು ಡೆತ್‌ನೋಟಲ್ಲಿ ಬರೆದಿದ್ದು ಆತ್ಮಹತ್ಯೆ ಮಾಡಿಕೊಂಡ ಕಾರ್ಕಳ ನಿಟ್ಟೆ ಪರಪ್ಪಾಡಿಯ ಅಭಿಷೇಕ್ ಆಚಾರ್ಯ(23) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೂಲಂಕಷ ತನಿಖೆ ನಡೆಸಲಾಗಿದೆ. ಆದರೆ ಈವರೆಗೆ ಹನಿಟ್ರ್ಯಾಪ್ ಸಂಬಂಧಿತ ಯಾವುದೇ ಸಾಕ್ಷ್ಯಗಳು ದೊರೆತಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ತನ್ನ ಸಾವಿಗೆ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿರುವ ಕಳಸದ ನಿರೀಕ್ಷಾ, ಮಣೇಲ್ ನಿವಾಸಿ ಕುಲಶೇಖರದ ನಂದಿನಿ ಡೈರಿಯಲ್ಲಿ ಕೆಲಸ ಮಾಡುವ ರಾಕೇಶ್, ಕಂಕನಾಡಿಯ ರಾಹುಲ್ ಹಾಗೂ ಗುರುಪುರ ಕೈಕಂಬದ ತಸ್ಲಿಂ ಅವರೇ ಕಾರಣ ಎಂದು ಅ.9ರಂದು ಬೆಳ್ಮಣ್‌ನ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಭಿಷೇಕ್ ಡೆತ್‌ನೋಟಲ್ಲಿ ಬರೆದಿದ್ದ. ಅಲ್ಲದೆ ನಿರೀಕ್ಷಾ ಅಭಿಷೇಕ್‌ಗೆ ಇನ್ಸ್ಟಾದಲ್ಲಿ ಬೆದರಿಕೆ ಹಾಕಿರುವ, ಯುಪಿಐ ಮೂಲಕ ಹಣ ಕಳಿಸಿದ ಸ್ಕ್ರೀನ್‌ಶಾಟ್ ವೈರಲ್ ಆಗಿತ್ತು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ಆರೋಪಿಗಳ ಮೊಬೈಲ್, ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಮೊಬೈಲ್, ಬ್ಯಾಂಕ್ ವಹಿವಾಟು, ಫೋನ್ ಕರೆ ಹಾಗೂ ಚಾಟ್ ದಾಖಲೆಗಳನ್ನು ಆಧರಿಸಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅದೇ ರೀತಿ ಅಭಿಷೇಕನ ಸ್ನೇಹಿತರು, ಬಂಧುಗಳು ಮತ್ತು ಸಂಬಂಧಿಕರನ್ನು ಕೂಡ ವಿಚಾರಣೆ ಮಾಡಿದ್ದಾರೆ.
ಅಭಿಷೇಕ್ ನ್ಯಾಯ ಒದಗಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ಯುವಕರು ಟ್ರೆಂಡ್ ಮಾಡಿದ್ದರು. ಇದೀಗ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಪ್ರಕರಣದ ಕುರಿತಂತೆ ಮಾಹಿತಿ ನೀಡಿದ್ದಾರೆ.
ಯುವತಿ ವಿಡಿಯೋ ಕಳುಹಿಸಿಲ್ಲ: ಎಸ್‌ಪಿ
‘ಆರೋಪಿ ಯುವತಿಯು ಮೊಬೈಲ್‌ನಲ್ಲಿ ಯಾವುದೇ ರೀತಿಯ ಅಶ್ಲೀಲ ಫೋಟೋ ಅಥವಾ ವಿಡಿಯೋಗಳು ಸಿಕ್ಕಿಲ್ಲ. ಅಲ್ಲದೆ ಆಕೆ ಯಾವುದೇ ವಿಡಿಯೋವನ್ನು ಯಾರಿಗೂ ಕಳುಹಿಸಿಲ್ಲ ಎನ್ನುವುದು ಎಂಬುದು ತನಿಖೆಯಿಂದ ಗೊತ್ತಾಗಿದೆ. ಸೆಪ್ಟೆಂಬರ್‌ನಲ್ಲಿ ಅಭಿಷೇಕ್ ಯುವತಿಗೆ ಕಳುಹಿಸಿದ್ದ ಹಣವನ್ನು ಅವಳು ಅದೇ ದಿನ ವಾಪಸ್ ಕೊಟ್ಟಿರುವುದು ಕಂಡುಬಂದಿದ್ದಾಗಿ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಅಭಿಷೇಕ್ ಆರೋಪಿ ಯುವತಿಯ ಅಶ್ಲೀಲ ವಿಡಿಯೋವನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯ ಸಹೋದ್ಯೋಗಿಗಳ ವಾಟ್ಸ್ಯಾಪ್ ಗ್ರೂಪ್‌ಗೆ ಹಂಚಿದ್ದನು. ಈ ವಿಷಯ ತಿಳಿದ ನಂತರ, ಆಕೆ ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಆತನಿಗೆ ತಿಳಿಸಿದ್ದಳು. ಈಗ ವೈರಲ್ ಆಗುತ್ತಿರುವ ವಿಡಿಯೋವನ್ನು ಆರೋಪಿ ಯುವತಿಯ ಸ್ನೇಹಿತೆಯೇ ತನ್ನ ಬಟ್ಟೆ ಬದಲಿಸುವ ಸಮಯದಲ್ಲಿ ಸ್ವತಃ ರೆಕಾರ್ಡ್ ಮಾಡಿ, ಆ ಯುವತಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಳು. ಆ ವಿಡಿಯೋವನ್ನು ಅಭಿಷೇಕ್, ಯುವತಿಯ ವಾಟ್ಸ್ಯಾಪ್ ಮೂಲಕ ಪಡೆದಿದ್ದನು ಎಂದು ಎಸ್ಪಿ ತಿಳಿಸಿದ್ದಾರೆ.
ಅಭಿಷೇಕ್ ಮೊಬೈಲ್ ಎಫ್‌ಎಸ್‌ಎಲ್‌ಗೆ!
ಅಭಿಷೇಕ್‌ನ ಮೊಬೈಲ್‌ನ್ನು ಹೆಚ್ಚಿನ ಪರಿಶೀಲನೆಗಾಗಿ ಎಫ್‌ಐಎಲ್‌ಗೆ ಕಳುಹಿಸಲಾಗಿದ್ದು, ಅದರಲ್ಲಿನ ವಿವರದ ಮಾಹಿತಿ ಪಡೆಯಲು ಬಾಕಿ ಇದೆ. ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಆರೋಪಿ, ಯುವತಿಯೋರ್ವಳ ಸ್ನೇಹಿತೆಯ ಉಡುಪು ಬದಲಿಸುವ ವಿಡಿಯೋ ತೆಗೆದ ಕಾರಣ ಹಾಗೂ ಅದನ್ನು ದುರುದ್ದೇಶಕ್ಕಾಗಿ ಬಳಸಲಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಡೆತ್‌ನೋಟ್‌ನಲ್ಲಿನ ಕೈಬರಹ ದೃಢೀಕರಣ ಕಾರ್ಯ ಪ್ರಗತಿಯಲ್ಲಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.

ಈ ಬಗ್ಗೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೃತ ಅಭಿಷೇಕ್ ಮತ್ತು ಆರೋಪಿ ಯುವತಿ ಕುರಿತು ಅಶ್ಲೀಲ ಪೋಸ್ಟ್‌ಗಳು ಹರಿದಾಡುತ್ತಿದ್ದು, ಇದು ಕಾನೂನಾತ್ಮಕ ಶಿಕ್ಷಾರ್ಹ ಅಪರಾಧವಾಗಿವೆ. ಈ ಕುರಿತು ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಹರ್ಷ ಪ್ರಿಯಂವದ, ಅಭಿಷೇಕ್ ಅವರ ಕುಟುಂಬ ಹಾಗೂ ಸ್ಥಳೀಯ ನಾಯಕರೊಂದಿಗೆ ನೇರವಾಗಿ ಮಾತನಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಡ್ರೆಸ್ ಬದಲಿಸುವ ವಿಡಿಯೋದಲ್ಲಿ ಕಾಣಿಸಿಕೊಂಡ ಯುವತಿ, ತನ್ನ ಅನುಮತಿಯಿಲ್ಲದೆ ವಿಡಿಯೋ ತೆಗೆದ ಕುರಿತಂತೆ ಮಂಗಳೂರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಾಗಿದೆ. ಅದೇ ರೀತಿ, ಆರೋಪಿ ಯುವತಿಯ ಖಾಸಗಿ ವಿಡಿಯೋ ವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿದ ಪ್ರಕರಣದ ಬಗ್ಗೆಯೂ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದಾಗಿ ಉಡುಪಿ ಎಸ್‌ಪಿ ಹರಿರಾಂ ಶಂಕರ್ ವಿವರಿಸಿದ್ದಾರೆ.