ಸಸಿಹಿತ್ಲು: ಐತಿಹಾಸಿಕ ಹಿನ್ನೆಲೆಯುಳ್ಳ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಕ್ಷೇತ್ರದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಎರಡನೇ ದಿನದ ಧಾರ್ಮಿಕ ಸಭೆಯು ಗಣ್ಯರ ಸಾಲು ಮತ್ತು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಜರುಗಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಿ, “ಸಮುದ್ರಕ್ಕೆ ಹೇಗೆ ಗಡಿ ಇಲ್ಲವೋ, ಹಾಗೆಯೇ ದೇವರಿಗೂ ಪರಿಧಿ ಇಲ್ಲ. ದೇವರ ಅಸ್ತಿತ್ವ ನಮಗೆ ಪ್ರಾರ್ಥನೆ ಮಾಡುವಾಗ ಅರಿವಾಗುತ್ತದೆ. ತಾಯಿ ಭಗವತಿಯು ಸಮುದ್ರ ತಟದಲ್ಲಿ ನೆಲೆಸಿ ನದಿ ಮತ್ತು ಸಮುದ್ರಗಳ ಮೂಲಕ ಸದಾ ದೈವ ಚಿಂತನೆ ಮಾಡುವಂತೆ ನಮಗೆ ಪ್ರೇರಣೆ ನೀಡುತ್ತಿದ್ದಾಳೆ” ಎಂದು ನುಡಿದರು.
ವೇದಮೂರ್ತಿ ಹರಿನಾರಾಯಣ ದಾಸ ಅಸ್ರಣ್ಣರು ದೀಪ ಪ್ರಜ್ವಲಿಸಿ ಮಾತನಾಡಿ, “ಕಲೆಯಲ್ಲಿ ದೇವರನ್ನು ಕಾಣುವುದೇ ನಿಜವಾದ ಕಲೆ. ಯಕ್ಷಗಾನ ಮತ್ತು ಭರತನಾಟ್ಯದಂತಹ ಕಲೆಗಳ ಮೂಲಕ ದೇವರನ್ನು ಆವಾಹಿಸುವ ಪ್ರಕ್ರಿಯೆಯೇ ಕಲಶವಾಗಿದೆ. ಕಲಶ ಎಂಬುದು ಕೇವಲ ಪಾತ್ರೆಯಲ್ಲ, ಅದು ದೈವತ್ವದ ಸಂಕೇತ” ಎಂದರು.

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಆಡಳಿತ ಮೊಕ್ತೇಸರರಾದ ಚಂದ್ರಶೇಖರ ಬೆಳ್ಚಡ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ಶ್ರೀ ನಾರಾಯಣ ಗುರು ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ನವೀನ್ ಚಂದ್ರ ಡಿ. ಸುವರ್ಣ, ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗೆರೋಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್, ಎಂಆರ್ ಪಿಎಲ್ ಒಎನ್ ಜಿಸಿ ನಿರ್ದೇಶಕರಾದ ನಂದಕುಮಾರ್ ವೇಲಾಯುಧನ್ ಪಿಳ್ಳೈ, ಪೊಳಲಿ ಮಾದುಕೋಡಿ ಶ್ರೀ ಸಾಯಿ ಹೀಲಿಂಗ್ ಸೆಂಟರ್‌ನ ವಿಜಯ ಗುರೂಜಿ, ಕಾಸರಗೋಡು ವೈದ್ಯ ಶ್ರೀ ಶಕ್ತಿತ್ರಯಂ ಕಾಲತಂತ್ರ ವಿದ್ಯಾಪೀಠದ ಜ್ಯೋತಿಷ್ಯಜ್ಞ ಮಧುಸೂದನ ಎಂ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ ಪೂಜಾರಿ ಹಾಗೂ ವುಡ್ಸೈಡ್ ಹೋಟೆಲ್ಸ್ ಜನರಲ್ ಮ್ಯಾನೇಜರ್ ಎಚ್. ಭಾಸ್ಕರ್ ಸಾಲ್ಯಾನ್ ಉಪಸ್ಥಿತರಿದ್ದರು.

ಇವರೊಂದಿಗೆ ಜುಪಿಟರ್ ಶಿಪ್ಪಿಂಗ್ ಮುಂಬೈ ಇದರ ಧೀರಜ್ ಶ್ರೀಯಾನ್, ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ನಿಸರ್ಗ, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಉದ್ಯಮಿ ನಾರಾಯಣ ಸುವರ್ಣ, ಕನಿಲ ಭಗವತಿ ಕ್ಷೇತ್ರದ ವಿಶ್ವನಾಥ ಕುದ್ರು ಮತ್ತು ಕನಿಲ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಕಡಪುರ ಅವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಮುಂಬೈ ಸಮಿತಿಯ ಪದಾಧಿಕಾರಿಗಳಾದ ಅಧ್ಯಕ್ಷ ವೇದ ಪ್ರಕಾಶ್ ಶ್ರೀಯಾನ್, ಗೌರವಾಧ್ಯಕ್ಷೆ ಗೀತಾ ಪಿ. ಕುಮಾರ್, ಉಪಾಧ್ಯಕ್ಷ ವಿಶ್ವನಾಥ ಪಂದುಬೆಟ್ಟು ಹಾಗೂ ಕೋಶಾಧಿಕಾರಿ ಸುರೇಶ್ ಕೆ. ಬಂಗೇರ ಅವರು ಭಾಗವಹಿಸಿದ್ದರು.

ಸಭೆಯಲ್ಲಿ ಮಾತೃ ಸಮಿತಿ ಅಧ್ಯಕ್ಷೆ ಕಸ್ತೂರಿ ಪಂಜ, ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಆಡಳಿತ ಸಮಿತಿ ಅಧ್ಯಕ್ಷ ವಾಮನ ಇಡ್ಯಾ, ಮಾಡೂರು ಕ್ಷೇತ್ರದ ಉಮೇಶ್ ಬಂಗೇರ, ಪಾಕ ಶಾಲೆ ಸಮಿತಿಯ ದಾಮು ಶೆಟ್ಟಿಗಾರ್ ಪಕ್ಷಿಕೆರೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ದೇವಸ್ಥಾನದ ವಿಶ್ವಸ್ಥ ಮಂಡಳಿಯ ಯಮುನಾ ಗಂಗಾಧರ್ ಮತ್ತು ಸಂತೋಷ್ ಗುಜರನ್ ಪಕ್ಷಿಕೆರೆ ಹಾಗೂ ಮಾಧ್ಯಮ ಸಮಿತಿ ಅಧ್ಯಕ್ಷ ನಿಶಾಂತ್ ಕಿಲೆಂಜೂರು ಉಪಸ್ಥಿತರಿದ್ದರು.
ಆದೀಶ್ ಬಜ್ಪೆ ಪ್ರಾರ್ಥನೆ ನೆರವೇರಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಬಂಗೇರ ಸ್ವಾಗತಿಸಿದರು. ಕಾರ್ಯದರ್ಶಿ ಯಾದವ ವಿ.ಕೆ. ನಿರೂಪಿಸಿ, ವಂದನಾರ್ಪಣೆ ಮಾಡಿದರು.
ಮಾ.8ರಂದು ಬ್ರಹ್ಮಕಲಶೋತ್ಸವ- ಸಮುದ್ರ ಆರತಿ
ಬ್ರಹ್ಮಕಲಶೋತ್ಸವವು ಮಾರ್ಚ್ 8ರಂದು ಬೆಳಿಗ್ಗೆ 11.15ಕ್ಕೆ ವೃಷಭ ಲಗ್ನದಲ್ಲಿ ವೈಭವದಿಂದ ನೆರವೇರಲಿದೆ. ಅಂದು ಸಂಜೆ ಸಸಿಹಿತ್ಲು ಸಮುದ್ರ ತೀರದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗದರ್ಶನದಲ್ಲಿ ಕಾಶಿಯ ಗಂಗಾರತಿಯ ಮಾದರಿಯಲ್ಲೇ ಭವ್ಯ ‘ಸಮುದ್ರ ಆರತಿ’ ಜರುಗಲಿದೆ