ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ತಾವು ಶ್ರಮವಹಿಸಿ ಮಂಜೂರು ಮಾಡಿಸಿದ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಕಿಡಿಕಾರಿದ್ದಲ್ಲದೆ, ಅದರ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.

ನಗರದ ಅಟಲ್ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರ ಇತ್ತೀಚಿನ ನಡವಳಿಕೆಯನ್ನು ʻಮಳೆ ನಿಂತ ಮೇಲೆ ಕೊಡೆ ಹಿಡಿದ’ ಪ್ರಸಂಗಕ್ಕೆ ಹೋಲಿಸಿದರು.
“ಕ್ಷೇತ್ರದ ಮಳೆಹಾನಿ ಕುರಿತು ಸಮಗ್ರ ಚಿತ್ರಣ ನೀಡಿ, ರಾಜ್ಯ ವಿಪತ್ತು ಉಪಶಮನ ನಿಧಿಯಡಿ (SDMF) 28 ಕಾಮಗಾರಿಗಳಿಗೆ ಅನುಮತಿ ಪಡೆಯಲಾಗಿತ್ತು. ಜಿಲ್ಲಾಧಿಕಾರಿಗಳು ಫೆಬ್ರವರಿ 16ರಂದೇ ಶಾಸಕರ ಪತ್ರವನ್ನು ಉಲ್ಲೇಖಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಆದರೆ, ಒಂದೂವರೆ ತಿಂಗಳ ನಂತರ ಎಚ್ಚೆತ್ತ ಐವನ್ ಡಿಸೋಜಾ ಸಹಿತ ಕಾಂಗ್ರೆಸ್ ನಾಯಕರು ಈಗ ಕ್ಷೇತ್ರದಲ್ಲಿ ‘ರೌಂಡ್ಸ್’ ಹೋಗಿ ಅನುದಾನ ತಂದಿದ್ದು ನಾವೇ ಎಂದು ಹೇಳಿಕೊಳ್ಳುತ್ತಿರುವುದು ಹತಾಶೆಯ ಪರಮಾವಧಿ” ಎಂದು ಶಾಸಕರು ಟೀಕಿಸಿದರು.

ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿದ ಅವರು, “ಕೊರೊನಾ ಸಂಕಷ್ಟದ ಕಾಲದಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿದ ದಕ್ಷಿಣ ಕನ್ನಡದ 163 ಆಶಾ ಕಾರ್ಯಕರ್ತೆಯರನ್ನು ಏಕಾಏಕಿ ಕೆಲಸದಿಂದ ತೆಗೆಯಲು ಹೊರಟಿರುವುದು ಖಂಡನೀಯ. 15-20 ವರ್ಷ ಸೇವೆ ಸಲ್ಲಿಸಿದವರ ಜೀವನದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ” ಎಂದು ಆಕ್ರೋಶ ಹೊರಹಾಕಿದರು.

ಜಿಲ್ಲೆಯ ಆರೋಗ್ಯ ವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಎಚ್ಚರಿಸಿದ ಕಾಮತ್, “ಸರ್ಕಾರಿ ವೈದ್ಯಾಧಿಕಾರಿಗಳು ಮುಷ್ಕರಕ್ಕೆ ಇಳಿದಿದ್ದರೂ ರಾಜ್ಯ ಸರ್ಕಾರ ʻಕುಂಭಕರ್ಣ’ ನಿದ್ರೆಯಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವರೇ ಆರೋಗ್ಯ ಸಚಿವರಾಗಿದ್ದರೂ ಇಲ್ಲಿನ ವೈದ್ಯರ ನ್ಯಾಯಯುತ ಬೇಡಿಕೆಗಳು ಈಡೇರುತ್ತಿಲ್ಲದಿರುವುದು ಶೋಚನೀಯ” ಎಂದರು.
“ಗುತ್ತಿಗೆದಾರರ 37 ಸಾವಿರ ಕೋಟಿ ರೂ. ಬಾಕಿ ಬಿಲ್ ಪಾವತಿಸದೆ ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿದೆ. ಸರ್ಕಾರಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಖಂಡನೀಯ” ಎಂದು ಸುದ್ದಿಗೋಷ್ಠಿಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕ್ಷೇತ್ರಕ್ಕೆ ಬಂದಿರುವ ಅನುದಾನವು ಶಾಸಕರ ಅಧಿಕೃತ ಪ್ರಯತ್ನದಿಂದ ಬಂದಿದ್ದೇ ಹೊರತು, ಕಾಂಗ್ರೆಸ್ ನಾಯಕರ ಪ್ರಚಾರದಿಂದಲ್ಲ ಎಂದು ಕಾಮತ್ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಮುಖಂಡರಾದ ರಮೇಶ್ ಕಂಡೆಟ್ಟು, ಪೂರ್ಣಿಮಾ, ಲಲ್ಲೇಶ್ ಕುಮಾರ್ ಮತ್ತಿರರರಿದ್ದರು.